ಜಿಲ್ಲೆ

ಚನ್ನಪಟ್ಟಣ ಮುಗಿಯದ ಟಿಕೆಟ್​ ಗದ್ದಲ

ಗಂಗಾಧರ ಬಿ ವಿ

*ಎನ್​ಡಿಎ ಅಭ್ಯರ್ಥಿಯಾಗಿ ಸಿಪಿವೈ? * ಕಾಂಗ್ರೆಸ್​ನಲ್ಲಿ ಮೇಲ್ನೋಟಕ್ಕೆ ಗೊಂದಲ ಗಂಗಾಧರ್​ ಬೈರಾಪಟ್ಟಣ ರಾಮನಗರ ಉಪ ಚುನಾವಣೆ ಸಮರಕ್ಕೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಆದರೆ, ಅಭ್ಯರ್ಥಿಗಳ ಆಯ್ಕೆ ಕಸರತ್ತು ಮಾತ್ರ ಇನ್ನೂ ಮುಂದುವರಿದೇ ಇದೆ. ಎನ್​ಡಿಎ ಮತ್ತು ಕಾಂಗ್ರೆಸ್​ ಪಕ್ಷಗಳಲ್ಲಿಯೂ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರಿದಿದ್ದು, ಇನ್ನೂ ಸಭೆ ನಡೆಸುವ ಮೂಲಕ ಕುತೂಹಲದ ಗಂಟನ್ನು ದೊಡ್ಡದು ಮಾಡುತ್ತಲೇ ಇದ್ದಾರೆ.

ಎನ್​ಡಿಎ ದಿನಕ್ಕೊಂದು ಅಚ್ಚರಿ

ಉಪ ಸಮರ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಆದರೆ, ಎನ್​ಡಿಎ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಅಚ್ಚರಿ ಸುದ್ದಿಗಳು ಹೊರ ಬರುತ್ತಲೇ ಇವೆ. ಒಮ್ಮೆ ನಿಖಿಲ್​, ಮತ್ತೊಮ್ಮೆ ಅನಿತಾ ಮಗದೊಮ್ಮೆ ಸಿ.ಪಿ.ಯೋಗೇಶ್ವರ್​ ಹೆಸರು ಕೇಳಿ ಬರುತ್ತಲೇ ಇದೆ.

ಗುರುವಾರ ಬಿಡದಿ ತೋಟದ ಮನೆಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ನಿಖಿಲ್​ ಹೆಸರು ಆಖೈರುಗೊಳಿಸಿದ್ದ ನಾಯಕರು ಅವರ ಮನವೊಲಿಕೆ ಜವಾಬ್ದಾರಿ ಹೊತ್ತಿದ್ದರು. ಇದೇ ಹೆಸರು ಅಂತಿಮ ಎನ್ನುವ ಸುದ್ದಿಯೂ ಚನ್ನಪಟ್ಟಣ ಕ್ಷೇತ್ರದಲ್ಲಿ ವ್ಯಾಪಕವಾಗಿ ಹರಡಿತ್ತು. ಆದರೆ, ಪಕ್ಷ ಸಂಟನೆ ಮಾಡಬೇಕು, ಯಾವುದೇ ಕಾರಣಕ್ಕೂ ನಾನು ಸ್ಪರ್ಧೆ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬದ್ಧವಾಗಿರುವ ಕಾರಣ ಮತ್ತೊಬ್ಬ ಅಭ್ಯರ್ಥಿ ಹುಡುಕಾಟ ಜೆಡಿಎಸ್​ಗೆ ಅನಿವಾರ್ಯವಾಯಿತು. ಇದರೊಂದಿಗೆ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಯುವಂತೆ ಸ್ವತ@ ಕುಮಾರಸ್ವಾಮಿ ಅವರೇ ಸೂಚಿಸಿದ್ದಾರೆ. ಆದರೆ, ಇದನ್ನು ಅನಿತಾ ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಯೋಗೇಶ್ವರ್​ ಅಂತಿಮ?!

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ ಎನ್​ಡಿಎ ಟಿಕೆಟ್​ ನಮಗೆ ನೀಡಬೇಕು ಎನ್ನುವ ಪಟ್ಟನ್ನು ಆರಂಭದ ದಿನಗಳಿಂದಲೂ ಹಾಕುತ್ತಲೇ ಇದ್ದಾರೆ. ಆದರೆ, ಇವರಿಗೆ ಕ್ಷೇತ್ರ ಬಿಟ್ಟುಕೊಡುವ ವಿಚಾರದಲ್ಲಿ ಎಚ್​ಡಿಕೆ ದ್ವಂದ್ವದಲ್ಲಿ ಇದ್ದಾರೆ. ಸ್ಥಳಿಯ ಜೆಡಿಎಸ್​ ಮುಖಂಡರೂ ಯೋಗೇಶ್ವರ್​ಗೆ ಟಿಕೆಟ್​ ನೀಡಬಾರದು ಎನ್ನುವ ಒತ್ತಡವನ್ನು ಕುಮಾರಸ್ವಾಮಿ ಅವರ ಮೇಲೆ ನಿರಂತರವಾಗಿ ಹಾಕುತ್ತಲೇ ಇದ್ದಾರೆ. ಆದರೆ, ನಿಖಿಲ್​, ಅನಿತಾ ಹೊರತಾಗಿ ಜೆಡಿಎಸ್​ಗೆ ಸೂಕ್ತ ಅಭ್ಯರ್ಥಿ ಕಾಣುತ್ತಿಲ್ಲ. ಅಲ್ಲದೆ, ಶುಕ್ರವಾರ ಸಂಧಾನಕ್ಕೆ ಹೋಗಿದ್ದ ಜೆಡಿಎಸ್​ನ ಹಾಲಿ ಮತ್ತು ಮಾಜಿ ಶಾಸಕರಲ್ಲಿ ಹೆಚ್ಚಿನವರು ಯೋಗೇಶ್ವರ್​ ಪರವಾಗಿಯೇ ಬ್ಯಾಟ್​ ಬೀಸಿರುವ ಕಾರಣ ಎಚ್​ಡಿಕೆ ಒಲ್ಲದ ಮನಸ್ಸಿನಿಂದಲೇ ಸಿಪಿವೈಗೆ ಟಿಕೆಟ್​ ನೀಡಲು ಒಪ್ಪಿದ್ದಾರೆ ಎನ್ನಲಾಗಿದೆ. ಆದರೆ ಜೆಡಿಎಸ್​ ಚಿಹ್ನೆ ಅಡಿಯಲ್ಲಿಯೇ ಸ್ಪರ್ಧೆಮಾಡಬೇಕು ಎನ್ನುವ ಷರತ್ತು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್​ನಲ್ಲೂ ಗೊಂದಲ

ಕಾಂಗ್ರೆಸ್​ ಪಾಲಿಗೆ ಚನ್ನಪಟ್ಟಣ ಕ್ಷೇತ್ರ ಮಹತ್ವದ ಕ್ಷೇತ್ರ. ಆದರೆ, ಇಲ್ಲಿಯೂ ಟಿಕೆಟ್​ ಗೊಂದಲ ಮುಂದುವರಿದೇ ಇದೆ. ಕಾರ್ಯಕರ್ತರು ಡಿ.ಕೆ.ಸುರೇಶ್​ ಸ್ಪರ್ಧೆ ಬಯಸುತ್ತಿದ್ದಾರೆ. ಆದರೆ, ಸುರೇಶ್​ ನಿರಾಕರಣೆ ಮಾಡುತ್ತಲೇ ಇದ್ದಾರೆ. ಇದರ ಹೊರತಾಗಿಯೂ ಬಿಎಂಐಸಿಪಿಐನ ಅಧ್ಯಕ್ಷ ರುನಂದನ್​ ರಾಮಣ್ಣ ಅವರ ಹೆಸರನ್ನು ಅಂತಿಮಗೊಳಿಸಿಕೊಂಡು ಕಾಂಗ್ರೆಸ್​ ನಾಯಕರು, ಇನ್ನೂ ಕಾರ್ಯಕರ್ತರು ಅಭಿಪ್ರಾಯ ಸಂಗ್ರಹ ಮಾಡುತ್ತಲೇ ಇದ್ದಾರೆ. ಇಲ್ಲಿಯೂ ಸುರೇಶ್​ಗೆ ಒತ್ತಡ ಹೇರುತ್ತಲೇ ಇದ್ದಾರೆ. ಇದೆಲ್ಲರದ ಹೊರತಾಗಿಯೂ ಎನ್​ಡಿಎ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಘೋಷಣೆ ಮೇಲೆ ಡಿ.ಕೆ.ಸುರೇಶ್​ ಸ್ಪರ್ಧೆ ನಿರ್ಧಾರವಾಗಲಿದೆ ಎನ್ನಲಾಗಿದೆ. ಒಂದು ವೇಳೆ ಯೋಗೇಶ್ವರ್​ ಸ್ಪರ್ಧೆ ಮಾಡದೇ ನಿಖಿಲ್​ ಅಥವಾ ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇ ಆದರೆ ಸುರೇಶ್​ ಸ್ಪರ್ಧಾ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.

ಘೋಷಣೆ ನಂತರವೇ ಅಧಿಕೃತ

ಕ್ಷೇತ್ರದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ವಿಚಾರದಲ್ಲಿ ನಡೆಯುತ್ತಿದೆಯಾದರೂ, ಪಕ್ಷದ ಹೈ ಕಮಾಂಡ್​ ಅಭ್ಯರ್ಥಿ ಘೋಷಣೆ ನಂತರವೇ ಅಧಿಕೃತವಾಗಲಿದೆ. ನ.25ಕ್ಕೆ ನಾಮ ಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಬಹುತೇಕ ಸೋಮವಾರ ಇಲ್ಲವೇ, ಮಂಗಳವಾರ ದೆಹಲಿಯಿಂದ ಅಧಿಕೃತ ಪಟ್ಟಿ ಹೊರ ಬೀಳಲಿದೆ.