ಜಿಲ್ಲೆ

ಚನ್ನಪಟ್ಟಣ ಟಿಎಪಿಸಿಎಂಎಸ್ ಗೆ ಸುರೇಶ್ ಅಧ್ಯಕ್ಷ, ಪೂಜಾ ಉಪಾಧ್ಯಕ್ಷೆ

ಚನ್ನಪಟ್ಟಣ

ನಗರದ ಪ್ರತಿಷ್ಠಿತ ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷರಾಗಿ ಎ.ಆರ್.ಚನ್ನೇಗೌಡ (ಅರಳಾಪುರ ಸುರೇಶ್) ಹಾಗೂ ಉಪಾಧ್ಯಕ್ಷೆಯಾಗಿ ಪೂಜಾ ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಸಂಸ್ಥೆಯ ಚುಕ್ಕಾಣಿ ಮತ್ತೊಮ್ಮೆ ಜೆಡಿಎಸ್ ಪಾಲಾಯಿತು.
ಸಂಸ್ಥೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸಂಘದ ಕಚೇರಿಯಲ್ಲಿ ಬುಧವಾರ ಚುನಾವಣೆ ನಿಗಧಿಯಾಗಿತ್ತು. ಈ ಎರಡು ಸ್ಥಾನಕ್ಕೆ ಈ ಇಬ್ಬರು ಹೊರತುಪಡಿಸಿ, ಬೇರೆ ಯಾವ ನಿರ್ದೇಶಕರು ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಈ ಇಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಕೆ.ಟಿ. ಉಮೇಶ್ ಘೋಷಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಎಚ್.ಸಿ.ಜಯಮುತ್ತು, ಎಂ.ಎನ್.ರಾಜಶೇಖರ್, ಇ.ತಿ.ಶ್ರೀನಿವಾಸ್, ಮಳೂರುಪಟ್ಟಣ ರವಿ, ರೇವ ಹೆಗ್ಗಡೆ, ಕೆ.ಮಂಜುನಾಥ್, ತಗಚಗೆರೆ ಪವನ್, ವಿ.ಎಚ್.ಮಧುಕರ್, ಪುಟ್ಟಸ್ವಾಮಿ, ಶಿಲ್ಪಾಮಹೇಶ್ ಭಾಗವಹಿಸಿದ್ದರು.

ಸಂಸ್ಥೆಯ ಅಭಿವೃದ್ಧಿಗೆ ದುಡಿಯುವೆ!

ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅರಳಾಪುರ ಸುರೇಶ್, ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ತಾಲೂಕಿನ ಎಲ್ಲಾ ಜೆಡಿಎಸ್ ಮುಖಂಡರು ನನ್ನ ಮೇಲೆ ವಿಶ್ವಾಸವಿರಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಎಲ್ಲರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತೇನೆ. ಸಂಸ್ಥೆಗೆ ಬಂದಿರುವ ಕಳಂಕದಲ್ಲಿ (ಅಕ್ಕಿ ಹಗರಣ) ನಮ್ಮ ಹಿಂದಿನ ಆಡಳಿತ ಮಂಡಳಿಯ ಪಾತ್ರವಿಲ್ಲ. ಇದನ್ನು ನಿರೂಪಿಸುವುದು ಸಹ ನನ್ನ ಉದ್ದೇಶವಾಗಿದೆ. ಸಂಸ್ಥೆಯ ಎಲ್ಲಾ ನಿರ್ದೇಶಕರ ಸಲಹೆ, ಸಹಕಾರದೊಂದಿಗೆ ಸಂಸ್ಥೆಯ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ತಿಳಿಸಿದರು