ಕುಂದುಕೊರತೆ ಸಭೆಯಲ್ಲಿ ಸಮಸ್ಯೆಗಳ ಅನಾವರಣ
ಚನ್ನಪಟ್ಟಣ
ತಾಲೂಕಿನಲ್ಲಿ ರೈತರ ಸಮಸ್ಯೆಗಳನ್ನು ಪಟ್ಟಿ ಮಾಡುವ ಉದ್ದೇಶದಿಂದ ಗುರುವಾರ ನಗರದ ಶತಮಾನೋತ್ಸವ ಭವನದಲ್ಲಿ ತಹಸೀಲ್ದಾರ್ ಮಹೇಂದ್ರ ಅಧ್ಯತೆಯಲ್ಲಿ ರೈತ ಮುಖಂಡರ ಸಭೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಲಿರುವ ರೈತರ ಕುಂದುಕೊರತೆ ಸಭೆಯ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು. ತಾಲೂಕು ಆಡಳಿತ ಆಯೋಜಿಸಿದ್ದ ಈ ಸಭೆಯಲ್ಲಿ ರೈತ ಮುಖಂಡರು ಹಾಗೂ ರೈತಸಂದ ಪದಾಧಿಕಾರಿಗಳು ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದರು. ಕೆಲವಿಚಾರಗಳ ಬಗ್ಗೆ ಸ್ಥಳದಲ್ಲಿದ್ದ ವಿವಿಧ ಅಧಿಕಾರಿಗಳನ್ನು ನಯವಾಗಿ ಬೆಂಡೆತ್ತಿದ್ದರು.
ಕಾಡುಪ್ರಾಣಿಗಳ ಹಾವಳಿ.., ಕಂದಾಯ ಇಲಾಖೆಯ ಸಮಸ್ಯೆ.., ವಿದ್ಯುತ್ ಸಮಸ್ಯೆ.., ಖಾತೆ, ಪಹಣಿ, ಸರ್ವೇ ಸಮಸ್ಯೆ, ಅರಣ್ಯ ಇಲಾಖೆಯ ಅವೈಾನಿಕ ಪರಿಹಾರ ಮಾನದಂಡ.., ಹೀಗೆ ನಾನಾ ಸಮಸ್ಯೆಗಳ ಬಗ್ಗೆ ಹಲವಾರು ರೈತ ಮುಖಂಡರು ತಹಸೀಲ್ದಾರ್ ಗಮನಕ್ಕೆ ತಂದರು. ಕೆಲ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು. ಸಣ್ಣಪುಟ್ಟ ಕೆಲಸಕ್ಕೆ ರೈತರನ್ನು ಅಲೆದಾಡಿಸುವ ಅಧಿಕಾರಿಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು.
ಈಗಾಗಲೇ ಹಲವಾರು ಸಮಸ್ಯೆಗಳಿಂದ ರೈತಸಂಕುಲ ಬಳಲುತ್ತಿದೆ. ನಾನಾ ಸಮಸ್ಯೆಗಳಿಂದಾಗಿ ರೈತರು ಬೇಸತ್ತಿದ್ದಾರೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ, ಬರದಿಂದ ಕಂಗೆಟ್ಟಿರುವ ಅನ್ನದಾತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ತಾಲೂಕಿನಲ್ಲಿ ವನ್ಯಜಿವಿಗಳ ಕಾಟ ಹೆಚ್ಚಾಗಿದೆ. ರೈತರ ಜಮೀನುಗಳನ್ನು ಮನೆ ಮಾಡಿಕೊಂಡಿರುವ ಆನೆಗಳು ಬೆಳೆಗಳನ್ನು ನಾಶಪಡಿಸುತ್ತಿದೆ.
ಆದರೆ, ಅರಣ್ಯ ಇಲಾಖೆ ಬೆಳೆ ಹಾನಿಗೆ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ಸರ್ಕಾರಿ ಅಧಿಕಾರಿಗಳಿಗೆ ಈಗಾಗಲೇ 7ನೇ ವೇತನ ಆಯೋಗ ಜಾರಿಯಾಗಿದೆ. ಆದರೆ, ರೈತರಿಗೆ ಮಾತ್ರ ಯಾವುದೋ ಕಾಲದಲ್ಲಿ ನಿಗದಿಪಡಿಸಿದ ಪರಿಹಾರ ನೀಡುತ್ತಿರುವುದು ಯಾವ ನ್ಯಾಯ? ವೈಾನಿಕ ಪರಿಹಾರ ನೀಡಿ ರೈತರನ್ನು ಬದುಕಿಸಿ ಎಂದರು.
ತಾಲೂಕಿನಲ್ಲಿ ಹಾವುಗಳ ಕಡಿತಕ್ಕೆ ಒಳಗಾಗಿ ಸಾಕಷ್ಟು ರೈತರು ಪ್ರಾಣ ಕಳೆದುಕೊಂಡಿದ್ದರೆ, ಬಹಳಷ್ಟು ಮಂದಿ ಶಾಶ್ವತವಾಗಿ ಊನಗೊಂಡಿದ್ದಾರೆ. ಹಾವು ಕಡಿತದಿಂದ ಮೃತಪಡುವ ವ್ಯಕ್ತಿಯ ಕುಟುಂಬಕ್ಕೆ ನೀಡುತ್ತಿರುವ ಎರಡು ಲ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ಬದಲಾಗಿ 15 ಲಕ್ಷ ರೂ. ಎಂದು ಆಗ್ರಹಿಸಿದರು.
ತಾಲೂಕಿನ ಜಲಾಶಯಗಳಿಂದ ಕೆರೆಗಳಿಗೆ ನೀರು ಹರಿಸದ ಪರಿಣಾಮ ರೈತರ ಬೆಳೆಗಳು ಒಣಗಿ ನಿಂತಿವೆ. ಕೆರೆಗಳಿಗೆ ಏಕೆ ನೀರು ಬಿಡುತ್ತಿಲ್ಲ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಕೆರೆಗಳಿಗೆ ನೀರು ಹರಿಸುವ ಮೂಲಕ ಅಳಿದುಳಿದ ಬೆಳೆ ರಸಿಕೊಳ್ಳಲು ರೈತರಿಗೆ ನೆರವಾಗಬೇಕು. ಇದರೊಂದಿಗೆ, ಇತ್ತೀಚೆಗೆ ಲೋಡ್ ಶೆಡ್ಡಿಂಗ್ ಹೆಚ್ಚಾಗುತ್ತಿದೆ.
ರೈತರ ಪಂಪ್ಸೆಟ್ಗಳಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು. ತಾಲೂಕಿನಲ್ಲಿ ಅಕ್ರಮ ಖಾತೆ ಪರಭಾರೆ ಸೇರಿ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ. ಅರ್ಹರು ಖಾತೆಗಾಗಿ ಕಚೇರಿಗೆ ಅಲೆಯುವಂತಾಗಿದೆ. ಆದರೆ, ಬಲಾಢ್ಯರು ಖಾಸಗಿ ಹಾಗೂ ಸರ್ಕಾರಿ ಜಮೀನುಗಳನ್ನು ನಿರಾಯಾಸವಾಗಿ ಕಬಳಿಸುತ್ತಿದ್ದಾರೆ. ಕಂದಾಯ ಅಧಿಕಾರಿಗಳನ್ನು ತಹಸೀಲ್ದಾರ್ ಹದ್ದುಬಸ್ತಿನಲ್ಲಿ ಇಟ್ಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದರೊಂದಿಗೆ ಶುದ್ದಕುಡಿಯುವ ನೀರು, ತ್ಯಾಜ್ಯ ಸಮಸ್ಯೆ, ಪಿಡಿಒಗಳ ಸಮಸ್ಯೆ, ವಿಎ, ಆರ್ಐಗಳ ಆಟಾಟೋಪ, ಸಹಕಾರ ಇಲಾಖೆಯ ಭ್ರಷ್ಟಾಚಾರ ಹೀಗೆ ನಾನಾ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಸುಮಾರು 4 ಗಂಟೆಗೂ ಹೆಚ್ಚುಕಾಲ ತಹಸೀಲ್ದಾರ್ ಮಹೇಂದ್ರ ಮತ್ತು ತಾಪಂ ಇಒ ಶಿವಕುಮಾರ್ ರೈತರ ಸಮಸ್ಯೆಗಳನ್ನು ಆಲಿಸಿದರು.
ಸಭೆಯ ಕೊನೆಯಲ್ಲಿ ಮಾತನಾಡಿದ ತಹಸೀಲ್ದಾರ್ ಮಹೇಂದ್ರ ಮತ್ತು ತಾಪಂ ಇಒ ಶಿವಕುಮಾರ್, ಸಭೆಯಲ್ಲಿ ನೀವುಗಳು ನೀಡಿರುವ ಎಲ್ಲ ಸಲಹೆಗಳನ್ನು ಸ್ವೀಕರಿಸಿದ್ದು, ನಿಮ್ಮಗಳ ಸಮಸ್ಯೆಗಳ ಬಗ್ಗೆ ವಿಸತ ವರದಿ ತಯಾರಿಸಿ ಶುಕ್ರವಾರ ನಡೆಯಲಿರುವ ಜಿಲ್ಲಾಮಟ್ಟದ ಸಭೆಯಲ್ಲಿ ಸಲ್ಲಿಸಲಾಗುವುದು. ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ಪೂರ್ಣಿಮ, ಪುಟ್ಟಸ್ವಾಮಿ, ಕಿರಣ್ ಕುಮಾರ್ ಉಪಸ್ಥಿತರಿದ್ದರು. ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಕೆ.ಮಲ್ಲಯ್ಯ, ತಿಮ್ಮೇಗೌಡ, ರಾಮೇಗೌಡ, ಕನ್ನಸಂದ್ರ ರಾಜು, ರುದ್ರಯ್ಯ, ಕೋದಂಡರಾಮು, ಅಬ್ಬೂರು ವಿಜಯ್, ಗುರುಕುಮಾರ್, ಕಜವೇ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್, ಕರವೇ ತಾಲೂಕು ಅಧ್ಯಕ್ಷ ಸಾಗರ್ ಮುಂತಾದವರು ಭಾಗವಹಿಸಿದ್ದರು.