ಜಿಲ್ಲೆ

ಯಾರ ಕೈಯಲ್ಲಿ ಆಡಲಿದೆ ಚನ್ನಪಟ್ಟಣ ಗೊಂಬೆ!

ಗಂಗಾಧರ ಬಿ ವಿ

*ಮೈತ್ರಿಯಲ್ಲಿ ಟಿಕೆಟ್​ ದಂಗಲ್​ *

ಕ್ಷೇತ್ರ ವಶಪಡಿಸಿಕೊಳ್ಳಲು ಡಿಕೆಶಿ ಕಸರತ್ತು * ಸಿಪಿವೈಗೆ ಎಚ್​ಡಿಕೆ ಟಕ್ಕರ್​?

ಗಂಗಾಧರ್​ ಬೈರಾಪಟ್ಟಣ ರಾಮನಗರ

ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಹಲವು ತಿಂಗಳಿಂದಲೂ ಟಿಕೆಟ್​ ವಿಚಾರವಾಗಿಯೇ ಸುದ್ದಿಯಲ್ಲಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಅಸಲಿ ಆಟ ಇಂದಿನಿಂದ ಆರಂಭಗೊಳ್ಳಲಿದ್ದು, ಇದಕ್ಕಾಗಿ ಪಕ್ಷಗಳು ಹಾಗೂ ನಾಯಕರು ಸಿದ್ಧಗೊಂಡಿದ್ದಾರೆ.

ಕಳೆದ ಎರಡೂ ಚುನಾವಣೆಯಲ್ಲಿಯೂ ಜೆಡಿಎಸ್​ ತೆಕ್ಕೆಗೆ ಜಾರಿದ್ದ ಕ್ಷೇತ್ರದ ಉಪ ಕದನದಲ್ಲಿ ಕಮಲ ಅರಳಿಸಿ ಅಸ್ತಿತ್ವ ಉಳಿಸಿಕೊಳ್ಳುವ ಯತ್ನದಲ್ಲಿ ಮಾಜಿ ಸಚಿವ ಯೋಗೇಶ್ವರ್​ ಇದ್ದರೆ, ಇದಕ್ಕೆ ಮೈತ್ರಿ ಪಕ್ಷದ ನಾಯಕ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಸದ್ದಿಲ್ಲದೆ ಟಕ್ಕರ್​ ಕೊಡುವ ಮೂಲಕ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎನ್ನುವ ಸಂದೇಶ ಸಾರಿರುವುದು ಮೈತ್ರಿಯಲ್ಲಿ ಟಿಕೆಟ್​ ಗುದ್ದಾಟ ತಾರಕಕ್ಕೆ ಏರುವಂತೆ ಮಾಡಿದೆ.

ಮತ್ತೊಂದೆಡೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಕ್ಷೇತ್ರವನ್ನು ಕೈವಶ ಮಾಡಿಕೊಂಡು ಪಕ್ಷಕ್ಕೆ ಅಸ್ತಿತ್ವ ಕೊಡಿಸುವ ಜತೆಗೆ ಮುಖ್ಯಮಂತ್ರಿ ಗದ್ದುಗೆ ಗುದ್ದಾಟದಲ್ಲಿ ಈ ಗೆಲುವನ್ನು ದಾಳವಾಗಿ ಬಳಸಿಕೊಳ್ಳುವಯತ್ನದಲ್ಲಿ ಇದ್ದಾರೆ. ಇದಕ್ಕಾಗಿ ಲೋಕಸಭೆ ಸಮರದ ನಂತರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಮೈತ್ರಿಯಲ್ಲಿ ಮೂಡದ ಒಮ್ಮತ

ಚನ್ನಪಟ್ಟಣ ಕ್ಷೇತ್ರ ನಮಗೇ ಬೇಕು ಎನ್ನುವ ತಿಕ್ಕಾಟ ಕುಮಾರಸ್ವಾಮಿ ಮತ್ತು ಯೋಗೇಶ್ವರ್​ ನಡುವೆ ಲೋಕಸಭೆ ಚುನಾವಣೆ ನಂತರದಿಂದಲೂ ನಡೆಯುತ್ತಲೇ ಇದೆ. ಈ ಬಾರಿ ಟಿಕೆಟ್​ ತಪ್ಪಿದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎನ್ನುವುದನ್ನು ಅರಿತಿರುವ ಯೋಗೇಶ್ವರ್​ ಟಿಕೆಟ್​ಗಾಗಿ ಸಾಧ್ಯ ಇರುವ ಎಲ್ಲ ಮಾರ್ಗಗಳನ್ನೂ ಬಳಕೆ ಮಾಡಿಕೊಂಡಿದ್ದಾರೆ. ಆದರೆ, ಸಿಪಿವೈಗೆ ಟಿಕೆಟ್​ ನೀಡಿದರೆ ಜೆಡಿಎಸ್​ ಪ್ರಾಬಲ್ಯ ಮರಳಿ ಪಡೆಯುವುದು ಕಷ್ಟ ಎನ್ನುವುದನ್ನು ಅರಿತಿರುವ ಕುಮಾರಸ್ವಾಮಿ ಹಾಗೂ ಸ್ಥಳಿಯ ಮುಖಂಡರು ಟಿಕೆಟ್​ ನೀಡಿಕೆಗೆ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದರ ನಡುವೆ ನಿಖಿಲ್​ ಸ್ಪರ್ಧೆಗೆ ಸಿದ್ಧತೆ ನಡೆದಿದ್ದು, ಅಧಿಕೃತವಾಗಿ ಘೋಷಣೆ ಆಗಬೇಕಿದೆ ಅಷ್ಟೇ ಎನ್ನುತ್ತವೆ ಜೆಡಿಎಸ್​ ಮೂಲಗಳು.

ಕಾಂಗ್ರೆಸ್​ ನಡೆಯೂ ನಿಗೂಢ

ಕ್ಷೇತ್ರದಲ್ಲಿ ಕೈ ಗೆಲುವಿನ ಮುದ್ರೆ ಒತ್ತುವ ಹಠಕ್ಕೆ ಬಿದ್ದಿರುವ ಡಿಸಿಎಂ ಡಿ.ಕೆ.ಶಿವಕುಮಾರ್​, ಆರಂಭದಿಂದಲೂ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಯಾರೇ ಸ್ಪರ್ಧೆ ಮಾಡಿದರೂ ನಾನೇ ಸ್ಪರ್ಧಿಸಿದಂತೆ ಎಂದು ಹೇಳುವ ಮೂಲಕ ಟಿಕೆಟ್​ ಕೌತುಕವನ್ನು ಹೆಚ್ಚಿಸಿದ್ದಾರೆ. ಈ ನಡುವೆ ಮಾಜಿ ಸಂಸದ ಡಿ.ಕೆ.ಸುರೇಶ್​ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿವೆಯಾದರೂ, ನಮ್ಮ ಕುಟುಂಬದವರು ಯಾರೂ ಸ್ಪರ್ಧಿಸುವುದಿಲ್ಲ ಎಂದು ಡಿಕೆಶಿಯೇ ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿ ಬಿಎಂಐಸಿಪಿಐ ಅಧ್ಯಕ್ಷ ರುನಂದನ್​ ರಾಮಣ್ಣ ಹೆಸರು ಪ್ರಬಲವಾಗಿ ಚಾಲ್ತಿಯಲ್ಲಿದೆ.

ಯಾರಿಗೂ ಸುಲಭವಲ್ಲ

ಮೈತ್ರಿ ಟಿಕೆಟ್​ ಗುದ್ದಾಡ ಸುಖಾಂತ್ಯ ಕಂಡರೆ ಗೆಲುವಿನ ರೇಸ್​ನಲ್ಲಿ ಎನ್​ಡಿಎ ಅಭ್ಯರ್ಥಿ ಮುಂದೆ ಇರಲಿದ್ದಾರೆ. ಒಂದು ವೇಳೆ ಹಗ್ಗ ಜಗ್ಗಾಟ ನಡೆದು ಯೋಗೇಶ್ವರ್​ಗೆ ಟಿಕೆಟ್​ ತಪ್ಪಿದರೆ ಖಂಡಿತವಾಗಿ ಇಲ್ಲಿ ಗೆಲುವು ಯಾರಿಗೂ ಸುಲಭವಲ್ಲ. ನಿಖಿಲ್​ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ, ಯೋಗೇಶ್ವರ್​ ಬೆಂಬಲವೂ ದೊರೆತರೆ ಗೆಲುವಿನ ಅವಕಾಶ ಹೆಚ್ಚಿರುತ್ತದೆ. ಒಂದು ವೇಳೆ ಯೋಗೇಶ್ವರ್​ ಸ್ಪರ್ಧೆ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಖಂಡಿತವಾಗಿ ಇದು ಮೈತ್ರಿಗೆ ಕಷ್ಟವಾಗಲಿದೆ.

ಎಲ್ಲರಿಗೂ ಅಸ್ತಿತ್ವದ ಪ್ರಶ್ನೆ

* ಕ್ಷೇತ್ರದಲ್ಲಿ ಸೋತರೆ ಕೇಂದ್ರ ಮಟ್ಟದಲ್ಲಿ ಕುಮಾರಸ್ವಾಮಿ ಪ್ರಾಬಲ್ಯ ಕಳೆದುಕೊಳ್ಳಬಹುದು. ಇಲ್ಲಿನ ಗೆಲುವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಚ್​ಡಿಕೆ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ.

* ಡಿ.ಕೆ.ಶಿವಕುಮಾರ್​ಗೆ ತವರು ಜಿಲ್ಲೆಯಲ್ಲಿ ಗೆಲುವಿನ ನಗೆ ಬೀರುವ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಿದೆ.

* ಯೋಗೇಶ್ವರ್​ ರಾಜಕೀಯ ಭವಿಷ್ಯ ಈ ಚುನಾವಣೆ ಸೋಲು ಗೆಲುವಿನ ಮೇಲಿಯೇ ನಿರ್ಧಾರವಾಗಲಿದೆ.

ಮುಸ್ಲಿಂ ಮತಗಳ ಓಲೈಕೆ

ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 2,24,886 ಮತದಾರರಿದ್ದಾರೆ. ಇವರಲ್ಲಿ 1,09,133 ಪುರುಷ ಮತ್ತು 1,15,753 ಮಹಿಳಾ ಮತದಾರರಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರು ಪ್ರಬಲರಾಗಿದ್ದರೂ ಸ್ಪರ್ಧಿಗಳು ಒಕ್ಕಲಿಗರೇ ಆಗಿರುವುದು ಈ ಸಮುದಾಯದ ಮತಗಳು ಹಂಚಿಕೆ ಆಗಲಿವೆ. ಸುಮಾರು 24 ಸಾವಿರಕ್ಕೂ ಹೆಚ್ಚಿರುವ ಮುಸ್ಲಿಂ ಮತದಾರರ ಮೇಲೆ ಕಾಂಗ್ರೆಸ್​ ಕಣ್ಣಿಟ್ಟಿದೆ. ಒಂದು ವೇಳೆ ಯೋಗೇಶ್ವರ್​ ಸ್ಪರ್ಧೆ ಮಾಡಿದರೆ ಖಂಡಿತವಾಗಿ ಇದು ಕಾಂಗ್ರೆಸ್​ಗೆ ಪ್ಲಸ್​ ಆಗಲಿದೆ. ಕ್ಷೇತ್ರದಲ್ಲಿ ದಲಿತರು 50 ಸಾವಿರದಷ್ಟು, ಲಿಂಗಾಯತರು 10 ಸಾವಿರ, ತಿಗಳರು 8500 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ.

2018 ಚುನಾವಣೆ ಫಲಿತಾಂಶ

ಹೆಸರು ಪಕ್ಷ ಮತಗಳು

ಎಚ್​.ಡಿ.ಕುಮಾರಸ್ವಾಮಿ      ಜೆಡಿಎಸ್​  87995

ಸಿ.ಪಿ ಯೋಗೇಶ್ವರ್​            ಬಿಜೆಪಿ     66465

ಎಚ್​.ಎಂ.ರೇವಣ್ಣ               ಕಾಂಗ್ರೆಸ್​ 30208

2023 ವಿಧಾನಸಭೆ ಚುನಾವಣೆ

ಎಚ್​.ಡಿ.ಕುಮಾರಸ್ವಾಮಿ ಜೆಡಿಎಸ್​ 96592

ಸಿ.ಪಿ.ಯೋಗೇಶ್ವರ್​      ಬಿಜೆಪಿ      80677

ಎಸ್​.ಗಂಗಾಧರ್​          ಕಾಂಗ್ರೆಸ್​ 15374