ಚನ್ನಪಟ್ಟಣ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕುಪಿತಗೊಂಡ ಯುವಕನೊಬ್ಬ ತನ್ನ ಯುವತಿಗೆ ಚಾಕುವಿನಿಂದ ಇರಿದು, ತಾನು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚನ್ನಪಟ್ಟಣ ನಗರದಲ್ಲಿ ಮಂಗಳವಾರ ನಡೆದಿದೆ.
ನಗರದ ಖಾಸಗಿ ಮೊಬೈಲ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಾಮನಗರ ವೆಂಕಟೇಶ್ ಎಂಬಾತ ಈ ಕೃತ್ಯ ನಡೆಸಿದ್ದಾನೆ. ಚನ್ನಪಟ್ಟಣದ ಮೊಬೈಲ್ ಶೋರೂಂ ನಲ್ಲಿ ವೆಂಕಟೇಶ್ ಮತ್ತು ಯುವತಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವತಿಯನ್ನು ಪ್ರೀತಿಸಲು ಮುಂದಾಗಿದ್ದ ವೆಂಕಟೇಶ್, ಯುವತಿಗೆ ಹಲವಾರು ಬಾರಿ ತನ್ನ ಪ್ರೇಮ ನಿವೇಧನೆಯನ್ನು ಮಾಡಿಕೊಂಡಿದ್ದ. ಆದರೆ ಯುವತಿ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೆ ಮಂಗಳವಾರ ಚನ್ನಪಟ್ಟಣದ ವರದರಾಜ ಸ್ವಾಮಿ ದೇವಾಲಯದ ಬಳಿ ಇರುವ ಯುವತಿ ಮನೆಗೆ ತೆರಳಿ ಮತ್ತೊಮ್ಮೆ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ.
ಈ ವೇಳೆ ಯುವತಿ ಮತ್ತೆ ಪ್ರೀತಿಯನ್ನು ನಿರಾಕರಿಸಿದ ಕಾರಣ ಚಾಕುವಿನಿಂದ ಯುವತಿಯ ಹೊಟ್ಟೆಗೆ ಇರಿದಿದ್ದಾನೆ. ನಂತರ ತಾನು ಸಹ ಕುತ್ತಿಗೆಗೆ ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ.
ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ವೆಂಕಟೇಶ್ಗೆ ಹೆಚ್ಚಿನ ರಕ್ತ ಹೋಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.