ಜಿಲ್ಲೆ

ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಪ್ರಮುಖ ಹುದ್ದೆಗಳೇ ಖಾಲಿ ಸೇವೆಗಳಿಗಾಗಿ ಸಾರ್ವಜನಿಕರ ಪರದಾಟ

ಗಂಗಾಧರ ಬಿ ವಿ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರಸಭೆಗೆ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಜಿಲ್ಲೆಯ 4 ತಾಲೂಕುಗಳಿಗೆ ಹೋಲಿಸಿದರೆ ಚನ್ನಪಟ್ಟಣ ನಗರ ವಿಸ್ತಾರ, ಜನಸಂಖ್ಯೆ ಸೇರಿ ಎಲ್ಲದರಲ್ಲೂ ಮುಂಚೂಣಿಯಲ್ಲಿವೆ. 31 ವಾರ್ಡ್‌ಗಳನ್ನು ಹೊಂದಿರುವ ನಗರಸಭೆ 4 ದಿಕ್ಕಿನಲ್ಲೂ ವಿಸ್ತಾರಗೊಂಡಿದೆ. 90 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದ ಆಡಳಿತ ಕೇಂದ್ರವಾದ ನಗರಸಭೆಯಲ್ಲಿ ಸಾರ್ವಜನಿಕ ಸೇವೆ ಒದಗಿಸಲು ಸಮಸ್ಯೆ ತಲೆದೋರಿದೆ. ಪ್ರಮುಖ ಶಾಖೆ ಎನ್ನಲಾಗುವ ಕಂದಾಯ, ಆರೋಗ್ಯ ಹಾಗೂ ತಾಂತ್ರಿಕ ಶಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದ್ದು, ಆಡಳಿತ ವ್ಯವಸ್ಥೆ ಮೇಲೆ ಕರಿನೆರಳು ಬೀರುತ್ತಿದೆ.

ಪ್ರಮುಖ ಹುದ್ದೆಗಳೇ ಇಲ್ಲ!: ನಗರಸಭೆಯಲ್ಲಿ ಕಂದಾಯ ನಿರೀಕ್ಷಕರ ಎರಡು ಹುದ್ದೆಗಳಿದ್ದು, ಆ ಪೈಕಿ ಒಂದು ಹುದ್ದೆ ಮಾತ್ರವಿದೆ. ಇದೀಗ ಅವರು ವರ್ಗಾವಣೆಯಾಗಲಿದ್ದು, ಕಂದಾಯ ಶಾಖೆಗೆ ಪ್ರಮುಖ ಹುದ್ದೆ ಖಾಲಿಯಾಗಲಿದೆ. ಇನ್ನು ನಗರದ ಸ್ವಚ್ಛತೆ ಸೇರಿ, ಪ್ರಮುಖ ಜವಾಬ್ದಾರಿ ಇರುವ ಆರೋಗ್ಯ ನಿರೀಕ್ಷಕರ ಹುದ್ದೆ 6 ಇರಬೇಕಾಗಿದ್ದು, ಪ್ರಸುತ್ತ ಇಬ್ಬರು ಮಾತ್ರ ಇದ್ದಾರೆ. ಇನ್ನು ತಾಂತ್ರಿಕ ವಿಭಾಗದಲ್ಲಿ ಎಇಇ, ಎಇ ಮಾತ್ರ ಲಭ್ಯವಿದ್ದು, ಎರಡು ಜೆಇ ಹುದ್ದೆಗಳು ಖಾಲಿ ಇವೆ. ಜತೆಗೆ ಪ್ರಥಮ ದರ್ಜೆ ಸಹಾಯಕ ಹುದ್ದೆ 4 ಇರಬೇಕಾಗಿದ್ದು, ಇಬ್ಬರು ಮಾತ್ರ ಇದ್ದಾರೆ. ಕೆಲವರಿಗೂ ವರ್ಗಾವಣೆ ಆದೇಶವಾಗಿದ್ದು, ಚನ್ನಪಟ್ಟಣ ನಗರಸಭೆಯಲ್ಲಿ ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳೇ ಇಲ್ಲ ಎಂಬಂತಾಗಲಿದೆ.

ನಗರಸಭೆಗೆ ಕಂದಾಯ, ಆರೋಗ್ಯ ಹಾಗೂ ತಾಂತ್ರಿಕ ಶಾಖೆಗಳೇ ಪ್ರಮುಖ. ಆದರೆ, ಈ ಮೂರು ಶಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದೆ. ನಗರಸಭೆಯಲ್ಲಿ ಪೌರಕಾರ್ಮಿಕರು ಸೇರಿ 286 ಸಿಬ್ಬಂದಿ ಇರಬೇಕು. ಆದರೆ, ಸದ್ಯ ನಗರಸಭೆಯಲ್ಲಿ ಕೇವಲ 123 ಸಿಬ್ಬಂದಿ ಮಾತ್ರ ಲಭ್ಯವಿದ್ದಾರೆ. ಪೌರಕಾರ್ಮಿಕರು 50ಕ್ಕೂ ಕಡಿಮೆ ಮಂದಿ ಇದ್ದಾರೆ. ಒಟ್ಟಾರೆ, ಪೌರಕಾರ್ಮಿಕರಿಂದ ಹಿಡಿದು ಪ್ರಮುಖ ಹುದ್ದೆಗಳವರೆಗೆ ನಗರಸಭೆ ಸಿಬ್ಬಂದಿ ಕೊರತೆಯಿಂದ ನುಲುಗುತ್ತಿದೆ.

ಸಾರ್ವಜನಿಕ ಸೇವೆಗೆ ಸಮಸ್ಯೆ!: ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕ ಸೇವೆಗೆ ಸಮಸ್ಯೆ ಎದುರಾಗುತ್ತಿದೆ. ನಗರದ ಸ್ವಚ್ಛತೆಯಿಂದ ಹಿಡಿದು ಕಂದಾಯ ವಿಚಾರಗಳವರೆಗೆ ಯಾವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಕಂದಾಯ ವಿಚಾರಗಳಿಗೆ ಸಂಬಂಧಿಸಿದ ಕೆಲಸಕ್ಕಂತೂ ಸಾರ್ವಜನಿಕರು ಪ್ರತಿನಿತ್ಯ ನಗರಸಭೆಗೆ ಅಲೆದಾಡುವಂತಾಗಿದೆ. ಸಿಬ್ಬಂದಿ ಕೊರತೆ ನೆಪ ಹೇಳಿ ಜನರನ್ನು ಸಾಗಹಾಕುತ್ತಿರುವ ಕೆಲಸ ನಡೆಯುತ್ತಿದೆ.

ತಾಂತ್ರಿಕ ವಿಭಾಗದಲ್ಲಿ ಅಧಿಕಾರಿಗಳ ಕೊರತೆ ಇರುವುದರಿಂದ ಕಾಮಗಾರಿಗಳ ಮೇಲೆ ನಿಗಾವಹಿಸುವುದರಲ್ಲೂ ವ್ಯತ್ಯಾಸವಾಗುತ್ತಿದೆ. ಆರೋಗ್ಯ ಶಾಖೆಯ ಜವಾಬ್ದಾರಿಯಲ್ಲೂ ಸಿಬ್ಬಂದಿ ಕೊರತೆಯ ಕರಿನೆರಳು ಬೀಳುತ್ತಿದೆ. ನಗರಸಭೆಯಲ್ಲಿ ಸಣ್ಣ ಕೆಲಸಕ್ಕೂ ಪ್ರತಿನಿತ್ಯ ಅಲೆಯುವ ವಾತಾವರಣ ಸೃಷ್ಠಿಯಾಗಿದೆ.

ಈಗಾಗಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಹೊತ್ತಿನಲ್ಲಿ ಇಬ್ಬರು ಇಂಜಿನಿಯರ್ ಸೇರಿ, ಹಲವು ಸಿಬ್ಬಂದಿ ಮತ್ತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಇನ್ನಷ್ಟು ಸಮಸ್ಯೆ ಸೃಷ್ಟಿಸಿದೆ. ಒಟ್ಟಾರೆ ಪ್ರಮುಖ ಆಡಳಿತ ಕೇಂದ್ರ ಎನಿಸಿರುವ ಚನ್ನಪಟ್ಟಣ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ಇನ್ನಾದರೂ ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಬೇಕಾಗಿದೆ.