ಅಂತಿಮ ವರದಿ ನೀಡಲು ತನಿಖಾ ತಂಡದ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಸೂಚನೆ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಚನ್ನಪಟ್ಟಣ ನಗರಸಭೆಯಲ್ಲಿ ನಡೆದಿದೆ ಎನ್ನಲಾಗುವ ಅಕ್ರಮಖಾತೆ ಹಾಗೂ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದ ವಿವಾದಕ್ಕೆ ಇತಿಶ್ರೀ ಹಾಡಲು ಜಿಲ್ಲಾಡಳಿತ ಮುಂದಾಗಿದೆ. ತನಿಖಾ ತಂಡಕ್ಕೆ ಈ ಬಗ್ಗೆ ಅಂತಿಮ ವರದಿ ನೀಡಲು ಜಿಲ್ಲಾಧಿಕಾರಿಗಳು ಗಡುವು ನೀಡಿದ್ದಾರೆ.
ಚನ್ನಪಟ್ಟಣ ನಗರಸಭೆ ಪೌರಾಯುಕ್ತ ಪುಟ್ಟಸ್ವಾಮಿ ಹಾಗೂ ಕಂದಾಯ ಸಿಬ್ಬಂದಿ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಂಡವೊಂದನ್ನು ನೇಮಿಸಿ ತನಿಖೆಗೆ ಆದೇಶಿಸಿದರು. ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಿವನಂಕರೀಗೌಡ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ, ಈ ಬಗ್ಗೆ ವರದಿ ನೀಡಲು ಕಳೆದ ಫೆ.7ರಂದು ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ, ಆ ತನಿಖಾ ತಂಡ ದಿನ ಪೂರ್ತಿ ಚನ್ನಪಟ್ಟಣ ನಗರಸಭೆ ಕಚೇರಿಯಲ್ಲಿ ಬೀಡುಬಿಟ್ಟು ನಾನಾ ಮಾಹಿತಿಯನ್ನು ಸಂಗ್ರಹಿಸಿ ೆ.28 ರಂದು ಜಿಲ್ಲಾಧಿಕಾರಿಗಳಿಗೆ ಮಧ್ಯಂತರ ವರದಿ ಸಲ್ಲಿಸಿತ್ತು.
ಚನ್ನಪಟ್ಟಣ ನಗರಸಭೆಯಲ್ಲಿನ ಅಕ್ರಮ ಖಾತೆ ಮತ್ತು ಅಧಿಕಾರಿಗಳ ವಿರುದ್ಧ ಸ್ವೀಕೃತವಾಗಿರುವ ಆರೋಪಗಳ ಕುರಿತ ಪೂರ್ಣ ಪ್ರಮಾಣದ ತನಿಖಾ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಜೂ.16 ರಂದು ತನಿಖಾ ತಂಡಕ್ಕೆ ನೋಟಿಸ್ ನೀಡಿದ್ದಾರೆ. ಇದಕ್ಕಾಗಿ 15 ದಿನಗಳ ಅಂತಿಮ ಗಡುವು ನೀಡಲಾಗಿದೆ.
ಈ ಸಂಬಂಧ ತನಿಖಾ ತಂಡದ ಮುಖ್ಯಸ್ಥರಾದ ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಿವನಂಕರೀಗೌಡರಿಗೆ ನೋಟಿಸ್ ನೀಡಿರುವ ಜಿಲ್ಲಾಧಿಕಾರಿಗಳು, ‘ಚನ್ನಪಟ್ಟಣ ನಗರಸಭೆ ಪೌರಾಯುಕ್ತ ಮತ್ತು ಸಿಬ್ಬಂದಿ ಅಕ್ರಮ ಖಾತೆ ಮಾಡುತ್ತಿರುವ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ತನಿಖಾ ವರದಿ ಸಲ್ಲಿಸುವಂತೆ ಆದೇಶಲಾಗಿತ್ತು.
ಈ ಮಧ್ಯೆ ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಪ್ರಾಥಮಿಕ ಅಥವಾ ಮಧ್ಯಂತರ ವರದಿ ಸಲ್ಲಿಸಿ, ಪೌರಾಯುಕ್ತರಿಂದ ಪೂರ್ಣಪ್ರಮಾದ ದಾಖಲೆ ಅಥವಾ ಕಡತ ಪಡೆದು ಪರಿಶೀಲಿಸಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿರುತ್ತೀರಿ. ಆದರೆ, ಈವರೆಗೂ ಯಾವುದೇ ವರದಿ ಸ್ವೀಕೃತವಾಗಿರುವುದಿಲ್ಲ. ಆದ್ದರಿಂದ, ನಗರಸಭೆಯಿಂದ ತನಿಖೆಗೆ ಅವಶ್ಯಕವಾಗಿರುವ ದಾಖಲೆ ಪಡೆದು 15 ದಿನದೊಳಗೆ ಅಂತಿಮ ವರದಿ ಸಲ್ಲಿಸಿ’ ಎಂದು ನೋಟಿಸ್‌ನಲ್ಲಿ ಸೂಚಿಸಿದ್ದಾರೆ.
ನಗರಸಭೆ ಪೌರಾಯುಕ್ತ ಪುಟ್ಟಸ್ವಾಮಿ ಹಾಗೂ ಕೆಲ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಈ ಹಿಂದಿನಿಂದಲೂ ವ್ಯಾಪಕ ದೂರುಗಳು ಕೇಳಿಬರುತ್ತಿದ್ದವು. ಅಕ್ರಮ ಖಾತೆ, ನಿಯಮಬಾಹಿರ ಖಾತೆಗಳು, ವ್ಯಾಪ್ತಿಯನ್ನು ಉಲ್ಲಂಘಿಸಿ ಖಾತೆ ಮಾಡಿರುವುದು ಸೇರಿ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ನಗರಸಭೆಯ ಅಧ್ಯಕ್ಷ ಸೇರಿ ಕೆಲಸದಸ್ಯರು ಈ ಬಗ್ಗೆ ಹೋರಾಟ ಸಹ ನಡೆಸಿದರು. ಈಗ, ಅಂತಿಮ ವರದಿ ಸಲ್ಲಿಸಲು ತನಿಖಾ ತಂಡಕ್ಕೆ ಅಂತಿಮ ಗಡುವು ನೀಡಿರುವ ಹಿನ್ನೆಲೆಯಲ್ಲಿ ನಗರಸಭೆಯಲ್ಲಿನ ಅಕ್ರಮಗಳು ಬಯಲಾಗಲಿವೆಯೇ ಎಂಬ ಕುತೂಹಲ ಮಾಡಿದೆ.
ತನಿಖಾ ತಂಡದ ತನಿಖೆ ಒಂದೆಡೆಯಾದರೆ, ಮತ್ತೊಂದೆಡೆ ನಗರಸಭೆಯಲ್ಲಿನ ಅಕ್ರಮಗಳ ಬಗ್ಗೆ ಲೋಕಾಯುಕ್ತ ಪೊಲೀಸರ ತನಿಖೆಯೂ ಪ್ರಗತಿಯಲ್ಲಿದೆ. ಪೌರಾಯುಕ್ತ ಮತ್ತು ಕಂದಾಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಲೋಕಾಯುಕ್ತ ಡಿವೈಎಸ್‌ಪಿಗಳಾದ ಗೌತಮ್, ಸುಧೀರ್ ನೇತೃತ್ವದಲ್ಲಿ ಸಿಪಿಐಗಳಾದ ಸತೀಶ್, ಅನಂತರಾಂ ಸೇರಿ ಇಪ್ಪತ್ತಕ್ಕೂ ಹೆಚ್ಚು ಸಿಬ್ಬಂದಿ ನಗರಸಭೆ ಮೇಲೆ ದಾಳಿ ಮಾಡಿ ಪ್ರತಿವಿಭಾಗಗಳನ್ನು ಜಾಲಾಡಿ, ಪೂರಕವಾದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಪೌರಾಯಕ್ತ ಪುಟ್ಟಸ್ವಾಮಿ ಹಾಗೂ ನಗರಸಭೆಯ ಹೊರಗುತ್ತಿಗೆ ನೌಕರನೊರ್ವನ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದರು. ಒಟ್ಟಾರೆ, ತನಿಖಾ ತಂಡ ಹಾಗೂ ಲೋಕಾಯುಕ್ತ ತನಿಖೆ ಎರಡೂ ಪ್ರಗತಿಯಲ್ಲಿದ್ದು, ನಗರಸಭೆಯಲ್ಲಿನ ಅಕ್ರಮಗಳ ಅನಾವರಣಕ್ಕೆ ಕಾಲ ಸನ್ನಿಹಿತವಾಗಿದೆ ಎನ್ನಲಾಗುತ್ತಿದೆ.