ಜಿಲ್ಲೆ

ಕೋರಂ ಕೊರತೆ ಚನ್ನಪಟ್ಟಣ ನಗರಸಭೆ ಮುಂದೂಡಿಕೆ

ಚನ್ನಪಟ್ಟಣ

ಕೋರಂ ಕೊರತೆಯಿಂದಾಗಿ ಚನ್ನಪಟ್ಟಣ ನಗರಸಭೆ ವಿಶೇಷ ಸಭೆಯನ್ನು ಮುಂದೂಡಿದ ಪ್ರಸಂಗ ಶುಕ್ರವಾರ ನಡೆಯಿತು.

ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರಸಭೆ ಆವರಣದಲ್ಲಿ ವಿಶೇಷ ಸಭೆ ಕರೆಯಲಾಗಿತ್ತು. ಆದರೆ, ಸಭೆಗೆ ಕೋರಂ ಕೊರತೆ ಕಾಡಿದ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಗಿದೆ ಎಂದು ಪೌರಾಯುಕ್ತ ಪುಟ್ಟಸ್ವಾಮಿ ಸಭೆಗೆ ಮಾಹಿತಿ ನೀಡಿದರು.

ಸ್ಥಾಯಿ ಸಮಿತಿ ರಚನೆ ಸೇರಿದಂತೆ ಕೆಲವಿಚಾರಗಳ ಚರ್ಚೆಗೆ ಈ ವಿಶೇಷ ಸಭೆ ಕರೆಯಲಾಗಿತ್ತು. ಸಭೆ ನಡೆಸಲು ೧೮ ಜನ ಸದಸ್ಯರ ಕೋರಂ ಅಗತ್ಯವಿದ್ದು, ಸಭೆಗೆ ೧೬ ಮಂದಿ ಮಾತ್ರ ಹಾಜರಾಗಿದ್ದರು.

ಈ ಹಿನ್ನೆಲೆಯಲ್ಲಿ ಸಭೆ ಕೊನೆಕ್ಷಣದಲ್ಲಿ ರದ್ದಾಯಿತು. ಸಭೆಗೆ ಕಾಂಗ್ರೆಸ್, ಬಿಜೆಪಿ ಸದಸ್ಯರು ಗೈರು ಹಾಜರಿಯಾಗಿದ್ದರು. ಇದರೊಂದಿಗೆ ಆಡಳಿತಾರೂಢ ಜೆಡಿಎಸ್ ನ ಇಬ್ಬರು ಸದಸ್ಯರೇ ಗೈರಾಗುವ ಮೂಲಕ ಸ್ವಪಕ್ಷದ ಆಡಳಿತಕ್ಕೆ ಸೆಡ್ಡು ಹೊಡೆದಿರುವುದು ಗೋಚರಿಸಿತು.

ಸ್ಥಾಯಿ ಸಮಿತಿ ರಚನೆಯ ಎಫೆಕ್ಟ್

ನಗರಸಭೆ ಸ್ಥಾಯಿ ಸಮಿತಿ ಈ ಹಿಂದಿನ ಅಧ್ಯಕ್ಷ ಮಂಜುನಾಥ್ ಅಧಿಕಾರ ಮುಕ್ತಾಯಗೊಂಡಿದ್ದು,‌ ನೂತನ ಸಮಿತಿ ರಚನೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಇಂದು ವಿಶೇಷ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಮಿತಿ ಅಧ್ಯಕ್ಷ ಸ್ಥಾನ ಅಲಂಕರಿಸಲು ಜೆಡಿಎಸ್ ನ ಸತೀಶ್ ಬಾಬು ಮತ್ತು ಲಕ್ಷ್ಮಮ್ಮ ಅಕಾಂಕ್ಷಿತರಾಗಿದ್ದು, ಈ ಪೈಕಿನ ಜೆಡಿಎಸ್ ಸದಸ್ಯರ ಹೆಚ್ಚಿನ ಒಲವು ಸತೀಶ್ ಬಾಬು ಪರವಾಗಿತ್ತು. ಈ ನಡೆಯಿಂದ ಸಹಜವಾಗಿ ಲಕ್ಷ್ಮಮ್ಮ ಅಸಮಾಧಾನಗೊಂಡಿದ್ದರು.

ಇದರೊಂದಿಗೆ, ಜೆಡಿಎಸ್ ಸದಸ್ಯ ಶ್ರೀನಿವಾಸ್ ಮೂರ್ತಿ ಸಹ ಸ್ವಪಕ್ಷೀಯರಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಈ ಬೆಳವಣಿಗೆಯ ಲಾಭ ಪಡೆಯಲು ಯತ್ನಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಸಭೆಗೆ ಗೈರಾಗುವ ಮೂಲಕ ಸಭೆ ರದ್ದಾಗುವಂತೆ ನೋಡಿಕೊಂಡರು.