ಜಿಲ್ಲೆ

ಚನ್ನಪಟ್ಟಣದಲ್ಲಿ ಆಧಾರ್ ಕಾರ್ಡ್ ತಲುಪದ ಗ್ರಾಮ

ಗಂಗಾಧರ ಬಿ ವಿ

 ಚನ್ನಪಟ್ಟಣ

ಆಧಾರ್ ಕಾರ್ಡ್ ಸೇರಿದಂತೆ ಸರ್ಕಾರದ ದಾಖಲೆಗಳನ್ನು ಪಡೆಯಲು ಜನತೆ ಮುಗಿಬೀಳುವುದು ಸಾಮಾನ್ಯ. ಆದರೆ, ಈ ಗ್ರಾಮದ ಜನ ಮನೆಬಾಗಿಲಿಗೆ ಸರ್ಕಾರ ದಾಖಲೆ ನೀಡಲು ಬಂದರೂ ಅದಕ್ಕೆ ಖ್ಯಾರೆ ಎನ್ನಲ್ಲ, ಇದರಿಂದಾಗಿ ಹಲವು ಸವಲತ್ತುಗಳಿಂದ ವಂಚಿತರಾಗುತ್ತಿದ್ದರೂ ಈ ಬಗ್ಗೆ ಅರಿವಿಲ್ಲ.

ತಾಲೂಕಿನ ಗಡಿಗ್ರಾಮ ಇರುಳಿಗರದೊಡ್ಡಿ (ಇಲ್ಲಿಗರದೊಡ್ಡಿ) ಪರಿಸ್ಥಿತಿ ಇದು. ಮಾಕಳಿ ಗ್ರಾಪಂನ ಈ ಗ್ರಾಮದಲ್ಲಿ ಇರುಳಿಗ ಜನಾಂಗದವರು ಹಲವಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. 80ಕ್ಕೂ ಹೆಚ್ಚು ಕುಟುಂಬಗಳು ಈ ಗ್ರಾಮದಲ್ಲಿದ್ದು, 350ಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಗ್ರಾಮದಲ್ಲಿ ರಸ್ತೆ, ಚರಂಡಿ, ನೀರು ಸೇರಿದಂತೆ ಮೂಲಸೌಕರ್ಯಗಳಿಗೆ ಕೊರತೆ ಇಲ್ಲದಿದ್ದರೂ ಅಜ್ಞಾನ ತಾಂಡವಾಡುತ್ತಿದೆ.

ದಾಖಲೆಗಳೇ ಇಲ್ಲ:

ಗ್ರಾಮದ ಹಲವು ಮಂದಿ ಬಳಿ ಆಧಾರ್ ಸೇರಿದಂತೆ ಸರ್ಕಾರಿ ದಾಖಲೆಗಳಿಲ್ಲ. ಆಧಾರ್ ಹೊಸದಾಗಿ ಬಂದಾಗ ಹಲವರು ಕಾರ್ಡ್ ಮಾಡಿಸಿಕೊಂಡಿದ್ದು ಬಿಟ್ಟರೆ, ಅದರ ನವೀಕರಣದ ಗೋಜಿಗೆ ಹೋಗದ ಕಾರಣ ಬಹುತೇಕ ಮಂದಿಗೆ ಆಧಾರ್ ಕಾರ್ಡ್ ಇಲ್ಲದಂತಾಗಿದೆ.

ಜಮೀನು ಕೂಲಿ, ಅರಣ್ಯ ಸುತ್ತಾಟ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿರುವ ಈ ಗ್ರಾಮದ ಜನಕ್ಕೆ ಅರಿವಿನ ಕೊರತೆ ಇದೆ. ಆಧುನಿಕ ಸಮಾಜಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಇವರ ಪ್ರಯಾಣವಿದೆ. ಈ ಹಿಂದೆ ಗ್ರಾಮದ ಮಕ್ಕಳು ಬಹುತೇಕ ಶಿಕ್ಷಣದಿಂದ ದೂರವಿದ್ದರು. ಇದೀಗ, ಆ ಪರಿಸ್ಥಿತಿ ಕೊಂಚ ಕಡಿಮೆಯಾಗಿದೆ. ಗ್ರಾಮದಲ್ಲಿರುವ ಅಂಗನವಾಡಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಲ್ಲಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಜಮೀನು ರಹಿತರಾದ ಇವರು ಸರ್ಕಾರಿ ದಾಖಲೆ ಪಡೆಯಲು ನಿರಾಶಕ್ತಿ ವಹಿಸುತ್ತಿದ್ದಾರೆ. ಸಂಬಂಧಪಟ್ಟವರು ದಾಖಲೆಗಳನ್ನು ನೀಡಲು ಮನೆ ಬಾಗಿಲಿಗೆ ಬಂದರೂ ದಾಖಲೆಗಳನ್ನು ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ.

ವಿಶೇಷ ಗಮನಬೇಕು:

ಅತಿ ಹಿಂದುಳಿದ ಈ ಸಮುದಾಯಕ್ಕೆ ಜಿಲ್ಲಾಡಳಿತ ವಿಶೇಷ ಗಮನಹರಿಸಬೇಕಾದ ಅನಿವಾರ್ಯತೆ ಇದೆ. ಗ್ರಾಮದಲ್ಲಿರುವ ಎಲ್ಲರಿಗೂ ಆಧಾರ್, ಪಡಿತರ ಚೀಟಿ, ಕಾರ್ಮಿಕರ ಚೀಟಿಗಳನ್ನು ನೀಡಲು ಕ್ರಮವಹಿಸಬೇಕಾಗಿದೆ. ಗ್ರಾಮದ ಜನರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಅವಶ್ಯಕತೆ ಇದೆ. ಗ್ರಾಮದಲ್ಲಿ ಹತ್ತಾರು ಗುಡಿಸಲುಗಳಿದ್ದು, ಗ್ರಾಮವನ್ನು ಗುಡಿಸಲುರಹಿತ ಗ್ರಾಮವನ್ನಾಗಿಸಬೇಕಿದೆ. ಇನ್ನು ಈ ಮಧ್ಯೆ ಕದ್ದುಮುಚ್ಚಿ ಬಾಲ್ಯವಿವಾಹ ನಡೆಯುತ್ತಲೇ ಇದ್ದು, ಅದರ ಕಡಿವಾಣಕ್ಕೂ ಕ್ರಮವಹಿಸಬೇಕಿದೆ.

ಗ್ರಾಮದ ಹಲವರ ಬಳಿ ಗುರುತಿನ ಚೀಟಿಗಳೇ ಇಲ್ಲ. ಗ್ರಾಮದಲ್ಲಿ ಹಲವು ಸಮಸ್ಯೆಗಳಿವೆ. ಈ ಕಾರಣದಿಂದಲೇ ಈ ಗ್ರಾಮದಲ್ಲಿ ಶನಿವಾರ ನಡೆದ ಡಿಸಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಕೆಲವರಿಗೆ ಆಧಾರ್ ಕಾರ್ಡ್ ಸೇರಿದಂತೆ ಕೆಲ ದಾಖಲೆಗಳನ್ನು ನೀಡುವ ಕೆಲಸ ಮಾಡಿದ್ದೇವೆ. ಮತ್ತೊಂದು ದಿನ ನಿಗದಿಪಡಿಸಿ, ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇವೆ.

ಬಿ.ಕೆ.ಸುದರ್ಶನ್, ತಹಸೀಲ್ದಾರ್, ಚನ್ನಪಟ್ಟಣ