ಮುಧೋಳ ತಾಲೂಕಿನ ಸೋರಗಾಂವದಲ್ಲಿ ಕಿತ್ತೂರ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತವನ್ನು ಗಣ್ಯರು ಉದ್ಘಾಟಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಮುರುಗೇಶ ನಿರಾಣಿ, ಅರುಣ ಕಾರಜೋಳ ಸಂಗಮೇಶ ನಿರಾಣಿ, ಮರೆಗುದ್ದಿಯ ಅಡವಿಸಿದ್ಧೇಶ್ವರಮಠದ ನಿರುಪಾಧೀಶ ಮಹಾಸ್ವಾಮಿಗಳು, ದಿಗಂಬರೇಶ್ವರ ಮಠದ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಜಮಖಂಡಿ- ಆಲಗೂರದ ಪಂಚಮಸಾಲಿ ಜಗದ್ಗುರು ಪೀಠದ ಮಹಾದೇಶ್ವರ ಮಹಾಸ್ವಾಮಿಗಳು ಇತರರಿದ್ದರು.  
ಜಿಲ್ಲೆ

ಚನ್ನಮ್ಮನ ಹೋರಾಟದ ಹಾದಿ ಸ್ಮರಣೀಯ

ಮುಧೋಳ: ಕಿತ್ತೂರು ಸಂಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ ರಾಣಿ ಚನ್ನಮ್ಮ 1857ರ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಳು. ಚನ್ನಮ್ಮನ ಶೌರ್ಯ, ಹೋರಾಟದ ಹಾದಿ ಸ್ಮರಣೀಯ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ತಾಲೂಕಿನ ಸೋರಗಾಂವಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಯುವಕ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿ, 200ನೇ ವಿಜಯೋತ್ಸವ, ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಿಂದ ಬ್ರಿಟಿಷರನ್ನು ಓಡಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಕಿತ್ತೂರು ರಾಣಿ ಚನ್ನಮ್ಮ ಹೋರಾಟ ಮಾಡಿದ್ದರು. ಚನ್ನಮ್ಮನ ಬೆನ್ನ ಹಿಂದೆ ಸಂಗೊಳ್ಳಿ ರಾಯಣ್ಣ, ಕಿತ್ತೂರಿನ ಜನತೆ ನಿಂತಿದ್ದರು. ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರು ಸಂಸ್ಥಾನ ಹಾಗೂ ಚನ್ನಮ್ಮ ತೋರಿದ್ದ ಪರಾಕ್ರಮ ಯಾರೂ ಮರೆಯುವಂತಿಲ್ಲ ಎಂದು ತಿಳಿಸಿದರು.

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಕಿತ್ತೂರು ಸಣ್ಣ ಸಂಸ್ಥಾನವಾಗಿದ್ದರೂ ದೊಡ್ಡದಾದ ಬ್ರಿಟಿಷ್ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿತ್ತು. ಸಮಸ್ಯೆ ಎಂತಹ ದೊಡ್ಡದಾಗಿದ್ದರೂ ಎದೆಗುಂದಬಾರದು ಎಂಬ ಸಂದೇಶವನ್ನು ಚನ್ನಮ್ಮನ ಹೋರಾಟದ ಬದುಕು ತಿಳಿಸುತ್ತದೆ ಎಂದರು.

ಎಂ.ಆರ್.ಎನ್. ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲವಾರು ತಾಲೂಕುಗಳಲ್ಲೇ ಇನ್ನೂ ಮೂರ್ತಿ ಪ್ರತಿಷ್ಠಾಪನೆ ಆಗಿಲ್ಲ. ಸೋರಗಾಂವದಂತಹ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು ಶ್ಲಾಘನೀಯ ಎಂದರು.

ಮರೆಗುದ್ದಿಯ ಅಡವಿಸಿದ್ಧೇಶ್ವರ ಮಠದ ಶ್ರೀ ನಿರುಪಾಧೀಶ ಮಹಾಸ್ವಾಮಿಗಳು, ಮರೆಗುದ್ದಿ ದಿಗಂಬರೇಶ್ವರ ಮಠದ ಶ್ರೀ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಜಮಖಂಡಿ ಆಲಗೂರದ ಪಂಚಮಸಾಲಿ ಜಗದ್ಗುರು ಪೀಠದ ಮಹಾದೇಶ್ವರ ಮಹಾಸ್ವಾಮಿಗಳು, ಸದಾಶಿವ ವಿಭೂತಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸೋರಗಾಂವ ಕಿತ್ತೂರು ರಾಣಿ ಚನ್ನಮ್ಮ ಯುವಕ ಸಂಘದ ಅಧ್ಯಕ್ಷ ಬಾಬು ಲೋಕಾಪುರ, ಧುರೀಣ ಅರುಣ ಕಾರಜೋಳ, ಸಂಗಮೇಶ ನಿರಾಣಿ, ಸಂಗಣ್ಣ ಕಾತರಕಿ, ಧರೆಪ್ಪ ಸಾಂಗ್ಲಿಕರ, ಸಿದ್ದು ಕೊಣ್ಣೂರ ಮಾತನಾಡಿದರು.

ಎಸ್.ಬಿ. ದಾನಪ್ಪಗೋಳ, ಡಾ. ರವಿ ನಂದಗಾಂವ, ಹನುಮಂತ ಸುಕಾಲಿ, ಸದಾಶಿವ ಚೌದರಿ, ರುದ್ರಪ್ಪ ಅಡವಿ ಇತರರಿದ್ದರು.

ರಾಣಿ ಬರಗಿ ನಿರೂಪಿಸಿ, ವಂದಿಸಿದರು.