ಬೆಳಗಾವಿ: ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಮತ್ತು ಹಾಲಗಿಮರಡಿ ಗ್ರಾಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಗುರುತಿಸಿದ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಪತ್ರ ಬರೆದಿದ್ದಾರೆ.
2010ರಲ್ಲಿ ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪ್ರಾರಂಭಗೊಂಡಿದೆ. ಆದರೆ, ಅರಣ್ಯ ಇಲಾಖೆಯಿಂದ ವಿಶ್ವವಿದ್ಯಾಲಯಕ್ಕೆ ಜಮೀನು ವರ್ಗಾವಣೆ ಆಗದಿರುವ ಹಿನ್ನೆಲೆಯಲ್ಲಿ ಮೂಲ ಸೌಕರ್ಯಗಳಿಲ್ಲದೆ ಉನ್ನತ ಶಿಕ್ಷಣ ಪಡೆಯಲು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಹಾಗಾಗಿ ರಾಣಿ ಚನ್ನಮ್ಮ ವಿವಿಗೆ ಅರಣ್ಯ ಜಮೀನು ಬದಲಾಗಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಮತ್ತು ಹಾಲಗಿಮರಡಿ ಗ್ರಾಮದಲ್ಲಿ 127.07 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಇದನ್ನು ಮಂಜೂರು ಮಾಡಬೇಕು.
ಬೆಳಗಾವಿ ಜಿಲ್ಲಾಧಿಕಾರಿಯವರು ಜಮೀನು ಮಂಜೂರಾತಿ ಪ್ರಸ್ತಾವನೆಯನ್ನು 2019ರ ಡಿಸೆಂಬರ್ 24ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. 1946-47ನೇ ಸಾಲಿನ ಪಹಣಿ ಪತ್ರಿಕೆಯಲ್ಲಿ ರೈತರು ಮತ್ತು ಲಾವಣಿ ಕಾಲಂನಲ್ಲಿ ಜಮೀನುಗಳು ಮಿಲಟರಿ ವ್ಯಾಪ್ತಿಗೆ ಬರುತ್ತದೆ ಎಂದು ನಮೂದಿಸಿರುತ್ತಾರೆ.
2020 ಜನವರಿ 24ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬೆಳಗಾವಿ ಜಿಲ್ಲಾಧಿಕಾರಿಗೆ ಪತ್ರ ಬರೆದು ರಾಣಿ ಚನ್ನಮ್ಮ ವಿವಿಗೆ ಜಮೀನು ಮಂಜೂರು ಮಾಡುವ ಕುರಿತು ಅರಣ್ಯ ಇಲಾಖೆ ಮತ್ತು ಮಿಲಿಟರಿ ಅವರಿಂದ ಅಭಿಪ್ರಾಯ ಪಡೆದು ಪ್ರಸ್ತಾವನೆ ಮರು ಸಲ್ಲಿಸಬೇಕು ಎಂದು ತಿಳಿಸಿರುತ್ತಾರೆ. ಹಾಗಾಗಿ ಶೀಘ್ರವೇ ರಾಣಿ ಚನ್ನಮ್ಮ ವಿವಿಗೆ ಜಮೀನು ಮಂಜೂರು ಮಾಡುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಪತ್ರದ ಮೂಲಕ ಮುಖ್ಯಮಂತ್ರಿಗಳಲ್ಲಿ ವಿನಂತಿಸಿದ್ದಾರೆ.