ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕಿತ್ತೂರ ರಾಣಿ ಚನ್ನಮ್ಮ ಜಯಂತಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಉಜ್ವಲ ಸರನಾಡಗೌಡ, ಮುಖಂಡ ಬಿ.ಎಂ. ಪಾಟೀಲ ಮತ್ತಿತರರಿದ್ದಾರೆ.  
ಜಿಲ್ಲೆ

ಚನ್ನಮ್ಮ ಶೌರ್ಯ-ಪರಾಕ್ರಮದ ಪ್ರತೀಕ; ಎಡಿಸಿ ಸೋಮಲಿಂಗ ಗೆಣ್ಣೂರ

ವಿಜಯಪುರ: ವೀರ ರಾಣಿ ಕಿತ್ತೂರು ಚನ್ನಮ್ಮ ಶೌರ್ಯ ಪರಾಕ್ರಮದ ಪ್ರತೀಕ. ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ವೀರಮಾತೆ. ಚನ್ನಮ್ಮಳ ದೇಶಪ್ರೇಮ ಪ್ರತಿಯೊಬ್ಬ ಭಾರತೀಯನಿಗೂ ಆದರ್ಶ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುಧವಾರ ನಡೆದ ಕಿತ್ತೂರ ರಾಣಿ ಚನ್ನಮ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟೀಷರ ವಿರುದ್ಧ ಸಮರಸಾರಿ ಇಡೀ ದೇಶವೇ ಸ್ವಾತಂತ್ರೃ ಸಂಗ್ರಾಮಕ್ಕೆ ಧುಮುಕುವಂತೆ ಪ್ರೇರಣೆ ನೀಡಿದ ರಾಣಿ ಚನ್ನಮ್ಮಳ ಇತಿಹಾಸ ಎಲ್ಲರಿಗೂ ಸ್ಫೂರ್ತಿದಾಯಕ ಎಂದರು.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯ ವಿರುದ್ಧ ಹೋರಾಟ ಮಾಡಿ, ಸಹಾಯಕ ಸೈನ್ಯ ಪದ್ಧತಿಯನ್ನು ತಿರಸ್ಕರಿಸಿದ ಚನ್ನಮ್ಮಳ ಧೈರ್ಯ, ಸಾಹಸಗಾಥೆಗಳನ್ನು ಇಂದಿನ ಹೆಣ್ಣುಮಕ್ಕಳು ಅರಿಯಬೇಕು. ಇತಿಹಾಸ ಅರಿತವರು ಇತಿಹಾಸ ನಿರ್ಮಿಸುತ್ತಾರೆ ಎಂಬಂತೆ ಇಂದಿನ ಪೀಳಿಗೆಗೆ ಚನ್ನಮ್ಮಳ ಇತಿಹಾಸದ ಪರಿಚಯ ಮಾಡಿಸುವುದು ಅತ್ಯವಶ್ಯಕವಾಗಿದೆ. ಚನ್ನಮ್ಮ ಒಳ್ಳೆಯ ಆಡಳಿತದ ಜೊತೆಗೆ, ಸಂಸ್ಥಾನದ ಅಭಿವೃದ್ಧಿ ಜೊತೆಗೆ ಜನರ ಕಷ್ಟಕಾರ್ಪಣ್ಯಗಳನ್ನು ದೂರಮಾಡಲು ಶ್ರಮಿಸಿದರು. ಅನೇಕ ಜನಪದ ಲಾವಣಿಗಳಲ್ಲಿ ಕಿತ್ತೂರ ರಾಣಿ ಚನ್ನಮ್ಮಳ ಸಾಹಸಗಾಥೆ, ಜೀವನ ಚರಿತ್ರೆ ಇಂದಿಗೂ ಜನಮಾನಸದಲ್ಲಿ ನೆಲೆನಿಂತಿವೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಬಾಲ್ಯದಲ್ಲಿಯೇ ಬಿಲ್ಲುಬಾಣ, ಕುದುರೆ ಸವಾರಿ, ಕತ್ತಿವರಸೆಯಂತಹ ಯುದ್ಧಕಲೆ ಕಲಿತ ಚನ್ನಮ್ಮ ತಾಯ್ನಡಿನ ರಕ್ಷಣೆಗಾಗಿ ದಿಟ್ಟತನದಿಂದ ಕಾದಾಡಿದ ಧೀರ ಮಹಿಳೆ. ದೇಶ ರಕ್ಷಣೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟು ಹಗಲಿರುಳು ದುಡಿದ ಮಹನೀಯರ ಸ್ಮರಣೆ ಹಾಗೂ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ಅಂಜುಮನ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಉಜ್ವಲ ಸರನಾಡಗೌಡ ಉಪನ್ಯಾಸ ನೀಡುತ್ತಾ, ಇಂದು ಜಯಂತಿ ಜೊತೆಗೆ ಬ್ರಿಟೀಷರ ವಿರುದ್ಧ ನಡೆದ ಯುದ್ಧದ 200ನೇ ವಿಜಯೋತ್ಸವ ಆಚರಿಸಲಾಗುತ್ತಿದೆ. ಪರಕೀಯರ ದಾಸ್ಯದ ವಿರುದ್ಧ ನಡೆದ ಹೋರಾಟ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ದಾಖಲಾಗಿದೆ. ಕಿತ್ತೂರ ರಾಣಿ ಚನ್ನಮ್ಮಳು ಬೆಳಗಾವಿಯ ಕಾಕತಿಯಲ್ಲಿ 1778 ಅ. 23 ರಂದು ಜನಿಸಿದರು. ತಂದೆ ಧೂಳಪ್ಪಗೌಡರಿಂದ ಯುದ್ಧಕಲೆಗಳನ್ನು ಕಲಿತುಕೊಂಡಿದ್ದರು. ದೇಸಾಯಿ ಮನೆತದ ಮಲ್ಲಸರ್ಜರ ಜೊತೆಗೆ ಅವರ ವಿವಾಹ ನಡೆಯಿತು. ಪತಿ, ಮಗನ ಸಾವಿನ ನಂತರ ದತ್ತುಕ ಪುತ್ರನಿಗೆ ಅಧಿಕಾರದ ಹೊಣೆ ನೀಡಲಾಯಿತು. ಈ ವೇಳೆ ಬ್ರಿಟಿಷರು ದತ್ತು ಪುತ್ರನಿಗೆ ಹಕ್ಕಿಲ್ಲ ಎಂಬ ಕಾಯ್ದೆ ತಂದಿದ್ದರು. ಅದರ ವಿರುದ್ಧ ಸೆಣಸಾಡಿದರು. ಸ್ವಜನದ್ರೋಹಿಗಳು ಹೋರಾಟದ ವೇಳೆ ತುಪಾಕಿಗಳಿಗೆ ಸಗಣಿ, ಮಣ್ಣು ಬೆರೆಸಿದ್ದರಿಂದ ಮದ್ದುಗುಂಡುಗಳು ಸಿಡಿಯದೇ ಹೋರಾಟದಲ್ಲಿ ಸೋಲಬೇಕಾಯಿತು ಎಂದು ಹೇಳಿದರು.

ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುಖಂಡ ಬಿ.ಎಂ. ಪಾಟೀಲ ಉಪಸ್ಥಿತರಿದ್ದರು. ಅಶ್ವಿನಿ ಹಿರೇಮಠ ತಂಡದಿಂದ ಸುಗಮ ಸಂಗೀತ ನಡೆಯಿತು. ಎಚ್.ಎ. ಮಮದಾಪೂರ ನಿರೂಪಣೆ ಮಾಡಿದರು.