ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ ಕಿತ್ತೂರ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆ ಪೊಲೀಸರು ಗುರುವಾರ ಓರ್ವನನ್ನು ಬಂಧಿಸಿ, 22.51 ಲಕ್ಷ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸುಭಾಷ ನಗರದ ಮುಜಫರ್ ಮಹ್ಮದ್ ಶೇಖ್ (30) ಬಂಧಿತ ವ್ಯಕ್ತಿ. ಡಿ. 30ರಂದು ಮಹಾಂತೇಶ ನಗರದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‌ನ ತಿಜೋರಿ ಒಡೆದು ಚಿನ್ನಾಭರಣ, ನಗದು ಕಳ್ಳತನವಾಗಿದೆ ಎಂದು ಡಿ. 31ರಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಾಲೂಕಿನ ಮುತಗಾದ ನರೇಂದ್ರ ಬಸವರಾಜ ಎಂಬುವರು ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಮಾಳಮಾರುತಿ ಠಾಣೆ ಪೊಲೀಸರು, ಮುಜಫರ್ ಮಹ್ಮದ್ ಶೇಖ್‌ನನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ 310 ಗ್ರಾಂ ಚಿನ್ನಾಭರಣ, 1,0650 ರೂ. ನಗದು, 6.50 ಲಕ್ಷ ರೂ. ಮೌಲ್ಯದ ಬೈಕ್ ಸೇರಿದಂತೆ ಒಟ್ಟು 22,51,650 ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ, ಮಾಳಮಾರುತಿ ಇನ್‌ಸ್ಪೆಕ್ಟರ್ ಸುನೀಲ ಪಾಟೀಲ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ತಂಡದಲ್ಲಿ ಬೆರಳಚ್ಚು ತಜ್ಞರ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಮಹಾದೇವ ಕುಂಬಾರ, ಪೊಲೀಸ್ ಇನ್‌ಸ್ಪೆಕ್ಟರ್ ಹೊನ್ನಪ್ಪ ತಳವಾರ, ಎಎಸ್‌ಐ ದಂಡಗಿ, ಎಂ.ಜಿ. ಕುರೇರ, ಕೆ.ಬಿ. ಗೌರಾಣಿ, ಜೆ.ಎನ್. ಭೋಸಲೆ, ಎಲ್.ಎಂ. ಮುಶಾಪುರೆ, ಎಸ್‌ಎಂ. ಗುಡದೇಗೋಳ, ಮಂಜುನಾಥ ಮಲಸರ್ಜಿ, ಎಂ.ಬಿ. ಅಡವಿ ಇದ್ದರು.