ಜಿಲ್ಲೆ

ಪರಿಸರ ಜಾಗೃತಿ ಪಾದಯಾತ್ರೆಯ ಮೂಲ ಉದ್ದೇಶ

ಹೊನ್ನಾಳಿ: ಧರ್ಮ, ಪರಿಸರ ಜಾಗೃತಿ ಹಾಗೂ ಸರ್ವ ಜನರ ಲೋಕ ಕಲ್ಯಾಣಕ್ಕಾಗಿ ಕಳೆದ 9 ವರ್ಷಗಳಿಂದ ಹಿರೇಕಲ್ಮಠದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಾ ಬಂದಿದ್ದೇವೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹಿರೇಕಲ್ಮಠದಿಂದ ಶ್ರೀಶೈಲಕ್ಕೆ 650 ಕಿ.ಮೀ ಪಾದಯಾತ್ರೆ ಮುಗಿಸಿ ಬುಧವಾರ ಹೊನ್ನಾಳಿಗೆ ಆಗಮಿಸಿದಾಗ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಕ್ತರು ಬರಮಾಡಿಕೊಂಡ ಸಂದರ್ಭದಲ್ಲಿ ಮಾತನಾಡಿದರು.

ಪಾದಯಾತ್ರೆ ದಾರಿಯುದ್ದಕ್ಕೂ ಗಿಡಗಳನ್ನು ನೆಟ್ಟು ಜನರಿಗೆ ಪರಿಸರದ ಬಗೆ ಜಾಗೃತಿ, ಸಾಮಾಜಿಕ ಕಳಕಳಿ ಮೂಡಿಸುತ್ತಿದ್ದೇವೆ. ಇದು ಕೇವಲ ಪ್ರಚಾರಕ್ಕಲ್ಲ, ಇತ್ತೀಚಿನ ಯುವಕರು ಯಾವುದೇ ಸಾಮಾಜಿಕ ಕಳಕಳಿ ಹೊಂದದೆ ಕೇವಲ ಮೊಬೈಲ್ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಇದರಿಂದ ಯುವಕರು ಸತ್ಕಾರ್ಯಗಳಿಂದ ವಿಮುಖರಾಗುತ್ತಿದ್ದಾರೆ ಎಂದರು.

ಧರ್ಮಕ್ಕೆ ಅಪಾಯ ಬಂದಾಗ ಯುವಕರು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಮಠಮಾನ್ಯಗಳ ಬಗ್ಗೆ ಗೌರವ ಇಲ್ಲದಂತಾಗಿವೆ. ಕೇವಲ ಆಧುನಿಕ ಜೀವನಕ್ಕೆ ಮಾರು ಹೋದವರನ್ನು ಧರ್ಮ ಕಾರ್ಯದಲ್ಲಿ ತೊಡಗಿಸಬೇಕು. ಜತೆಗೆ ಧರ್ಮ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಗದ್ದಿಗೇಶ್, ಪುರಸಭೆ ಅಧ್ಯಕ್ಷ ಮೈಲಪ್ಪ, ಪುರಸಭೆ ಸದಸ್ಯ ಹೊಸಕೇರಿ ಸುರೇಶ್,ಪುರಸಭೆ ಮಾಜಿ ಉಪಾಧ್ಯಕ್ಷ ಸರಳಿನಮನೆ ಮಂಜಪ್ಪ, ಕುಮಾರಸ್ವಾಮಿ, ಕತ್ತಿಗೆ ನಾಗರಾಜ್ ಹಾಗೂ ಇತರರು ಇದ್ದರು.