ಜಿಲ್ಲೆ

ಶುಭ ಕಾರ್ಯಗಳಿಗೆ ಬಾಗಿಲು ತೆರೆಯದ ವಾಲ್ಮೀಕಿ ಭವನ

Davangere - Desk - Basavaraja P

ಚನ್ನಗಿರಿ: ಪಟ್ಟಣದಲ್ಲಿ 2.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ವಾಲ್ಮೀಕಿ ಭವನ ಪರಿಶಿಷ್ಟರ ಶುಭ ಕಾರ್ಯಗಳಿಗೆ ಲಭ್ಯವಾಗದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

2011-12ರಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸರ್ಕಾರದಿಂದ 1 ಕೋಟಿ ಅನುದಾನ ತಂದು ಭವನಕ್ಕೆ ಭೂಮಿಪೂಜೆ ನೆರವೇರಿಸಿ, ಭೂಸೇನಾ ನಿಗಮಕ್ಕೆ ಕಾಮಗಾರಿ ನೀಡಲಾಗಿತ್ತು.

ನಂತರ ವಡ್ನಾಳ್ ರಾಜಣ್ಣ ಶಾಸಕರಾಗಿ ಅವದಿ ಪೂರೈಸಿದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇಬ್ಬರು ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿರಲಿಲ್ಲ.

ಅರ್ಧಕ್ಕೆ ನಿಂತಿದ್ದ ಕಾಮಗಾರಿ ಪೂರ್ಣಗೊಳಿಸುವಂತೆ ನಾಯಕ ಸಮುದಾಯ ಒತ್ತಡ ತಂದರೂ ಪ್ರಯೋಜನವಾಗಿರಲಿಲ್ಲ. ಜಿಪಂ ಸದಸ್ಯ ಹೊದಿಗೆರೆ ರಮೇಶ್ ಜಿಪಂನಿಂದ 16 ಲಕ್ಷ ರೂ. ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿದರಲ್ಲದೆ, ಎಚ್. ಆಂಜನೇಯ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ 2016ರಲ್ಲಿ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದರು. ಭೂಸೇನಾ ನಿಗಮದ ವಿಳಂಬ ಧೋರಣೆಯಿಂದ ಕೆಲಸ ಮತ್ತೆ ನಿಂತು ಹೋಯಿತು.

ಮಾಡಾಳು ವಿರೂಪಾಕ್ಷಪ್ಪ 2018ರಲ್ಲಿ ಎರಡನೇ ಬಾರಿಗೆ ಶಾಸಕರಾದ ನಂತರ ಸರ್ಕಾರದಿಂದ ಮತ್ತೆ 50 ಲಕ್ಷ ರೂ. ಮಂಜೂರು ಮಾಡಿಸಿದ್ದರು. ನಂರತ ಕಾಮಗಾರಿ ಪೂರ್ಣಗೊಂಡು ಕಟ್ಟಡ ಉದ್ಘಾಟನೆಯಾಗಿದ್ದರೂ ಜನರ ಬಳಕೆಗೆ ದೊರೆತಿಲ್ಲ. ಇದು ಸಮುದಾಯಕ್ಕೆ ತೀವ್ರ ಬೇಸರ ತರಿಸಿದೆ.

ದಾರಿಹೋಕರ ತಂಗುದಾಣ: ವಾಲ್ಮೀಕಿ ಭವನ ಪಟ್ಟಣದ ಮಧ್ಯಭಾಗದಲ್ಲಿದೆ. ಈ ಪ್ರದೇಶ ಸದಾ ಜನಸಂದಣಿಯಿಂದ ಕೂಡಿದೆ. ಸದ್ಯಕ್ಕೆ ಕಟ್ಟಡ ರಾತ್ರಿ ದಾರಿಹೋಕರ ತಂಗು ದಾಣವಾಗಿದೆ. ರಾತ್ರಿ ಅಲ್ಲಿ ವಾಸ್ತವ್ಯ ಹೂಡಿದವರು ತ್ಯಾಜ್ಯ ಎಸೆದು ಗಲೀಜು ಮಾಡಿ ಹೋಗುತ್ತಾರೆ. ಪರಿಣಾಮ ಕಟ್ಟಡದಲ್ಲಿ ದುರ್ವಾಸನೆ ಬೀರುತ್ತದೆ. ಅನೈತಿಕ ಚಟುವಟಿಕೆಗಳೂ ನಡೆಯುತ್ತಿದ್ದು, ಮದ್ಯದ ಬಾಟಲಿಗಳು ಕಟ್ಟಡದ ಆವರಣದಲ್ಲಿ ಬಿದ್ದಿರುತ್ತವೆ. ಆಗಲೇ ಕಟ್ಟಡದ ಸುಣ್ಣಬಣ್ಣ ಮಾಸಿದೆ.

ತಾಲೂಕಿನಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ಅಧಿಕವಾಗಿದ್ದು, ಅವರ ಶುಭ ಕಾರ್ಯಗಳಿಗೆ ಭವನ ನಿರ್ಮಿಸಿ, ಉದ್ಘಾಟನೆ ಮಾಡಿದರೂ ಜನರಿಗೆ ಉಪಯೋಗವಾಗಿಲ್ಲ. ಅಧಿಕಾರಿಗಳು ಇನ್ನಾದರೂ ಭವನವನ್ನು ಸಮುದಾಯಕ್ಕೆ ಸಮರ್ಪಣೆ ಮಾಡಬೇಕು.
l ಮಾಡಾಳು ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಮಾಜಿ ಅಧ್ಯಕ್ಷ.
ವಾಲ್ಮೀಕಿ ಭವನದ ಕಾಮಗಾರಿ ಮುಗಿಸಿ ಸಮುದಾಯಕ್ಕೆ 2014ರ ಮಾರ್ಚ್‌ನಲ್ಲಿ ಹಸ್ತಾಂತರಿಸಲಾಗಿದೆ. ಅವರು ಟ್ರಸ್ಟ್‌ನವರಿಗೆ ಒಪ್ಪಿಸಬೇಕು. ನಮ್ಮ ಇಲಾಖೆಯ ಎಲ್ಲ ಕೆಲಸ ಮಗಿದಿದೆ.
l ಆರ್.ಭಾರತಿ, ಎಇಇ, ಭೂಸೇನಾ ನಿಗಮ, ದಾವಣಗೆರೆ.
ಕಟ್ಟಡ ಬಳಸದೆ ಹಾಳಾಗಿದೆ. ಯಾರೂ ಜವಾಬ್ದಾರಿ ಹೊತ್ತುಕೊಳ್ಳದೆ ಕಟ್ಟಡಕ್ಕೆ ಈ ಪರಿಸ್ಥಿತಿ ಬಂದಿದೆ. ಜನರ ಸೇವೆಗೆ ಬೇಕಾದ ಯಾವುದೇ ಸಾಮಗ್ರಿಗಳನ್ನು ಇಲಾಖೆ ನೀಡಿಲ್ಲ. ಕೆಲವು ಪಾತ್ರೆ, ಪ್ಲಾಸ್ಟಿಕ್ ಕುರ್ಚಿಗಳನ್ನಿಟ್ಟು ಎರಡು ವರ್ಷ ಕಳೆದಿದೆ.
l ಗಾದ್ರಿರಾಜು, ಪುರಸಭೆ ಸದಸ್ಯ, ಚನ್ನಗಿರಿ.
ವಾಲ್ಮೀಕಿ ಭವನ ಲಭಿಸಿದರೆ ಸಮುದಾಯದವರು ತಮ್ಮ ಶುಭ ಕಾರ್ಯಗಳನ್ನು ನಡೆಸಿಕೊಳ್ಳುತ್ತಾರೆ ಎಂಬ ಆಸೆಯಿಂದ ಬೇರೆ ಬೇರೆ ಇಲಾಖೆಗಳಿಂದ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಿದರೂ ಕೆಲವರಿಂದಾಗಿ ಕಟ್ಟಡದ ಬಾಗಿಲು ತೆರೆದಿಲ್ಲ.
l ಹೊದಿಗೆರೆ ರಮೇಶ್, ಜಿಪಂ ಮಾಜಿ ಸದಸ್ಯ