ಚನ್ನಗಿರಿ: ಗುಣಮಟ್ಟ ಮತ್ತು ಪ್ರಮಾಣದ ದಿನಬಳಕೆ ವಸ್ತುಗಳು ಸುಲಭ ಮತ್ತು ಕಡಿಮೆ ದರದಲ್ಲಿ ಜನರಿಗೆ ಸಿಗುವಂತೆ ತುಮ್‌ಕೋಸ್ ಸಂಸ್ಥೆ ವ್ಯವಸ್ಥೆ ಮಾಡಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.
ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ತುಮ್‌ಕೋಸ್ ಸಂಸ್ಥೆಯಿಂದ ನೂತನ ಸೂಪರ್ ಮಾರ್ಕೆಟ್‌ಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಜನರು ನಿತ್ಯಬಳಕೆಯ ಸಾಮಗ್ರಿಗಳನ್ನು ತರಲೆಂದು ನಗರ ಪ್ರದೇಶಗಳಿಗೆ ಹೋಗುತ್ತಾರೆ. ಇದರಿಂದ ಹಣದ ಜತೆ ಸಮಯ ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸಲು ಸೂಪರ್ ಮಾರ್ಕೆಟ್ ಪ್ರಾರಂಭ ಮಾಡಿದ್ದು, ಜನರಿಗೆ ಅನುಕೂಲವಾಗಲಿದೆ ಎಂದರು.
ಈಗಾಗಲೇ ತುಮ್‌ಕೋಸ್ ಅಡಕೆ ವ್ಯಾಪಾರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಇದು 16 ಸಾವಿರ ಸದಸ್ಯರನ್ನು ಹೊಂದಿದ್ದು, ಇವರ ಅನುಕೂಲಕ್ಕಾಗಿ ಅಡಕೆ ವ್ಯಾಪಾರದ ಜತೆ ಕೃಷಿ ಸಂಬಂಧಿತ ಸಾಧನ ಸಲಕರಣೆಗಳನ್ನು ಸುಲಭವಾಗಿ ಸಿಗುವಂತೆ ಮಾಡಿದೆ ಎಂದರು.
ತುಮ್‌ಕೋಸ್ ಅಧ್ಯಕ್ಷ ಆರ್.ಎಂ.ರವಿ ಅಜ್ಜಿಹಳ್ಳಿ ಮಾತನಾಡಿ, ದಿನಸಿ, ಗಿಫ್ಟ್ ಮತ್ತು ಮನೆಗೆ ಬೇಕಾದ ಎಲ್ಲ ಸಾಮಗ್ರಿಗಳು ಗ್ರಾಹಕರಿಗೆ ಸಿಗುವಂತೆ ವ್ಯಾಪಾರ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರ ಆಸಕ್ತಿ ನೋಡಿಕೊಂಡು ಮತ್ತಷ್ಟು ಅಂಗಡಿಗಳನ್ನು ತೆರಯಲಾಗುತ್ತದೆ ಎಂದರು.
ಸಂಸ್ಥೆಯ ಸದಸ್ಯರು ಖಾತೆ ಹೊಂದಿರುವುದರಿಂದ ನೇರವಾಗಿ ಬಂದು ಖರೀದಿಸಬಹುದು. ಷೇರುದಾರ ಅಲ್ಲದವರಿಗೆ ಗ್ರಾಹಕರಾಗಿ ನಾಮಿನಲ್ ಖಾತೆಯನ್ನು ಸಂಸ್ಥೆಯಲ್ಲಿ ತೆರೆಯಲಾಗುತ್ತದೆ. ತಾಲೂಕಿನ ಗ್ರಾಹಕರು ಚಿಲ್ಲರೆ ಖರೀದಿಸಿ ಹೆಚ್ಚು ಹಣ ನೀಡುತ್ತಾರೆ. ಸಂಸ್ಥೆಯಲ್ಲಿ ಕಡಿಮೆ ಲಾಭದಲ್ಲಿ ಜನರಿಗೆ ಎಲ್ಲ ವ್ಯವಸ್ಥೆಗಳು ಸಿಗುತ್ತದೆ ಎಂದರು.
ಸಂಸ್ಥೆ ನಿರ್ದೇಶಕರಾದ ಟಿ.ವಿ.ರಾಜು ತಿಪ್ಪಗೊಂಡನಹಳ್ಳಿ, ಎಂ.ಸಿ.ದೇವರಾಜ್, ಚಂದ್ರಶೇಖರ್ ಬನ್ನಿಹಟ್ಟಿ, ಗಂಗಾಧರ್ ವಡ್ನಾಳ್ ಇತರರಿದ್ದರು.