ಜಿಲ್ಲೆ

ಮಕ್ಕಳಿಗೆ ಬೇಕಿದೆ ಬದುಕಿನ ಶಿಕ್ಷಣ

Davangere - Desk - Basavaraja P

ಚನ್ನಗಿರಿ: ಸಮಾಜದಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಬೇರೆ ಯಾರಿಗೂ ಸಿಗಲಾರದು. ಇದೊಂದು ಪುಣ್ಯದ ಕೆಲಸ. ದೇವರು, ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಶಿಕ್ಷಕರಿಗೆ ಮಾತ್ರ ಕಲ್ಪಿಸಿದ್ದಾನೆ ಎಂದು ಶಾಸಕ ಬಸವರಾಜ್ ಶಿವಗಂಗಾ ಬಣ್ಣಿಸಿದರು.

ಇಲ್ಲಿನ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಭದ್ರ ದೇಶ ಕಟ್ಟುವುದು ಶಿಕ್ಷಕರ ಕೈಯಲ್ಲಿದೆ. ಉತ್ತಮ ಶಿಕ್ಷಣ ನೀಡುವ ಜತೆಗೆ ಮಕ್ಕಳನ್ನು ದೇಶಪ್ರೇಮಿಯನ್ನಾಗಿ ರೂಪಿಸಬೇಕು. ಉತ್ತಮ ಶಿಕ್ಷಕ ಎನ್ನುವ ಹೆಸರು ಶಾಶ್ವತವಾಗಿ ಉಳಿಯುವಂತಾಗಬೇಕು ಎಂದರು.

ಶಾಲೆಯಲ್ಲಿ ಪಾಠದ ಜತೆಗೆ ಸಂಸ್ಕಾರ, ಶಿಸ್ತು, ಸಮಯಪಾಲನೆ ಕಲಿಕೆಯ ಶಿಕ್ಷಣ ನೀಡಬೇಕು. ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ. ಆದಕಾರಣ ಬದುಕನ್ನು ಕಟ್ಟಿಕೊಳ್ಳುವಂತಹ ಶಿಕ್ಷಣ ಕಲಿಸಬೇಕಿದೆ ಎಂದರು.

ಗುರುಭವನ ನಿರ್ಮಾಣ ಮಾಡಲು ಸರ್ಕಾರದಿಂದ 4 ಕೋಟಿ ಹಣ ಮಂಜೂರಾಗಿದೆ. ಮುಂದಿನ ವರ್ಷ ಶಿಕ್ಷಕರ ದಿನವನ್ನು ಹೊಸ ಕಟ್ಟಡದಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗುತ್ತದೆ. ಗುರುಭವನ ಕಟ್ಟಡದ ಜತೆ ಮಳಿಗೆ ನಿರ್ಮಿಸಿ, ಅದರಿಂದ ಬರುವ ಬಾಡಿಗೆ ಅದಾಯವನ್ನು ಶಿಕ್ಷಕರ ಕಲ್ಯಾಣಕ್ಕಾಗಿ ನೀಡಲಾಗುತ್ತದೆ ಎಂದರು.

ತಾಲೂಕಿನ 5 ಸರ್ಕಾರಿ ಶಾಲೆ ದತ್ತು ಪಡೆದು ಮೂಲಸೌಕರ್ಯ ಕಲ್ಪಿಸಿ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ. 10ನೇ ತರಗತಿ ಗಣಿತ, ವಿಜ್ಞಾನ ಹಾಗೂ ಸಮಾಜ ಶಾಸ್ತ್ರ ವಿಷಯಗಳಿಗೆ ಮನೆಯಲ್ಲಿ ಉಚಿತವಾಗಿ ಪಾಠ ಮಾಡುವ ಶಿಕ್ಷಕರಿಗೆ ಮುಂದಿನ ಶಿಕ್ಷಕರ ದಿನದಂದು 51 ಸಾವಿರ ಹಣ ನೀಡಿ ಗೌರವಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ 51 ಶಿಕ್ಷಕರನ್ನು ಗೌರವವಿಸಲಾಯಿತು. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್. ಬಿಲ್ಲಪ್ಪ, ಬಿಇಒ ಎಲ್. ಜಯಪ್ಪ, ತಾಪಂ ಇಒ ಬಿ.ಕೆ. ಉತ್ತಮ್, ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಧರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ. ಸ್ವಾಮಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಬಿ. ಯೋಗರಾಜ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರವಿಕಿರಣ್ ಇದ್ದರು.