ಜಿಲ್ಲೆ

ಭಕ್ತಿಸಾಗರದಲ್ಲಿ ಮಿಂದೆದ್ದ ಚನ್ನಗಿರಿ ಜನರು

ಚನ್ನಗಿರಿ: ಪಟ್ಟಣದ ಅಗ್ರಹಾರದ ಶ್ರೀ ರಾಘವೇಂದ್ರಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ನೆರವೇರಿತು. ವಿಶೇಷ ಪೂಜೆಗಳು ನಡೆದು ಜನರು ಭಕ್ತಿಸಾಗರದಲ್ಲಿ ಮಿಂದೆದ್ದರು.

ಪಟ್ಟಣದ ರಾಜಬೀದಿಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವರಿಗೆ ಹೂಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಯಿತು. ಅಭಿಷೇಕ, ಪುಣ್ಯಾಹ, ಅಂಕುರದರ್ಪಣ, ಅಷ್ಟವದನ ಸೇವೆ, ರಕ್ಷಾಬಂಧನ ಹಾಗೂ ಪಲ್ಲಕ್ಕಿ ಉತ್ಸವಗಳು ನೆರವೇರಿದವು.

ದೇವರ ಕಳಸ ಸ್ಥಾಪನೆ, ಧ್ವಜಾರೋಹಣ, ನವಗ್ರಹಸ್ಥಾಪನೆ, ಗಜೇಂದ್ರೋತ್ಸವ ನಡೆಯಿತು. ರಥ ಪೂಜೆ, ರಥಾಂಗಹೋಮ, ಬಲಿದಾನ, ಮಧ್ಯಾಹ್ನ 1ಕ್ಕೆ ರಥೋತ್ಸವ ನೆರವೇರಿತು.

ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಎನ್.ಕೃಷ್ಣ ಉಪಾಧ್ಯ, ಕಾರ್ಯದರ್ಶಿ ಸಿ.ವಿ.ಸುಮತೀಂದ್ರ, ಸಿ.ಜಿ.ವೆಂಕಟೇಶ್, ಎ.ಎನ್.ಗುರುಪ್ರಸಾದ್, ಕೆ.ರಾಮಮೂರ್ತಿ, ವಿದ್ಯಾರಣ್ಯ ಮಾರ್ಕೊಡ್, ಪಿ.ವಿ.ವಾದಿರಾಜ್ ಇತರರಿದ್ದರು.