ಜಿಲ್ಲೆ

ಅಂಕದಷ್ಟೇ ಕ್ರಿಯಾಶೀಲತೆ, ಆರೋಗ್ಯವೂ ಮುಖ್ಯ

Davangere - Desk - Basavaraja P

ಚನ್ನಗಿರಿ: ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಧನಾತ್ಮಕ ವಿಷಯಗಳನ್ನು ಹೇಳಿ ಅವರನ್ನು ಉತ್ತಮ ಪ್ರಜೆಯಾಗಿ ರೂಪಿಸಬೇಕು ಎಂದು ಶಾಸಕ ಬಸವರಾಜ ಶಿವಗಂಗಾ ಸಲಹೆ ನೀಡಿದರು.

ತಾಲೂಕಿನ ಮರವಂಜಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ಹಾಗೂ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ, ಮಾತನಾಡಿದರು.

ಶಿಕ್ಷಕರು ಶಾಲೆಗೆ ಹೆಸರು ಬರಲಿ ಎಂಬ ಕಾರಣದಿಂದ ಮಕ್ಕಳು ಹೆಚ್ಚು ಅಂಕ ಪಡೆಯುವತ್ತ ಗಮನ ಹರಿಸುತ್ತಾರೆ. ಇದರಿಂದ ಮಕ್ಕಳ ಮೇಲೆ ಒತ್ತಡ ಹೇರಿದಂತಾಗುತ್ತದೆ. ಇಂದಿನ ಪೈಪೋಟಿ ಕಾಲದಲ್ಲಿ ಅಂಕ ಎಷ್ಟು ಮುಖ್ಯವೂ, ಕ್ರಿಯಾಶೀಲತೆ, ಆರೋಗ್ಯವೂ ಅಷ್ಟೇ ಮುಖ್ಯ. ವಾರದಲ್ಲಿ ಒಂದು ದಿನ ಪುಸ್ತಕ ಮುಕ್ತವಾಗಿರಲು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿದರೆ ಮಗು ಆರೋಗ್ಯದಿಂದ ಇರುತ್ತದೆ ಎಂದರು.

ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸಕಲ ಮೂಲಸೌಕರ್ಯ ಕಲ್ಪಿಸಿದ್ದಲ್ಲದೆ, ನುರಿತ ಶಿಕ್ಷಕರನ್ನು ನೇಮಿಸಿದೆ. ಬೆಳಗ್ಗೆಯಿಂದ ಸಂಜೆವರೆಗೂ ಮಕ್ಕಳು ನಿಮ್ಮೊಂದಿಗೆ ಇರುತ್ತಾರೆ. ಅವರ ಆಸಕ್ತಿ ಗುರುತಿಸಿ, ಪ್ರೋತ್ಸಾಹ ನೀಡಿದಾಗ ಯಶಸ್ಸು ಕಾಣಲು ಸಾಧ್ಯ ಎಂದರು.

ಗ್ರಾಮಗಳಲ್ಲಿ ಗ್ರಂಥಾಲಯಗಳಿಗಾಗಿ ಅನುದಾನ ನೀಡಿ, ಕಟ್ಟಡ ನಿರ್ಮಿಸಿ ಅಗತ್ಯ ಪುಸ್ತಕಗಳನ್ನು ನೀಡಿದೆ. ಗ್ರಾಮದ ಯುವತಿಯರು, ಯುವಕರು ಇದರ ಪ್ರಯೋಜನ ಪಡೆಯಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಪುಟ್ಟಮ್ಮ, ಸದಸ್ಯರಾದ ಆರ್.ರುದ್ರನಾಯ್ಕ, ಕಮಲಮ್ಮ, ಜೀವನ್‌ಕುಮಾರ್, ಅಭಿಲಾಷ, ಮಾಜಿ ಅಧ್ಯಕ್ಷ ಜಿ.ಎಂ.ತಿಪ್ಪೇಸ್ವಾಮಿ ಗೌಡ್ರು ಇದ್ದರು.