ಚನ್ನಗಿರಿ: ಸರ, ಮನೆ, ವಾಹನ ಕಳ್ಳತನ ಅಧಿಕವಾಗಿರುವ ಕಾರಣ ಅಂಗಡಿ ಮತ್ತು ಮನೆ ಮಾಲೀಕರು ಕಡ್ಡಾಯವಾಗಿ ಸಿಸಿ ಕ್ಯಾಮರಾವನ್ನು ಅಳವಡಿಸಬೇಕು. ಇದರಿಂದ ಅಪರಾಧ ತಡೆಯಬಹುದು ಎಂದು ಡಿಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ತಿಳಿಸಿದರು.
ಪಟ್ಟಣದ ಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಸೋಮವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಕಿರಾಣಿ ಅಂಗಡಿ ವರ್ತಕರ ಸಂಘದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಪೊಲೀಸ್ ಇಲಾಖೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದೆ. ಪೊಲೀಸರು ದೇವರಲ್ಲ, ನಿಮ್ಮಂತೆ ಮನುಷ್ಯರು ಇಲಾಖೆ ಅವರಿಗೆ ವ್ಯಾಪ್ತಿಯನ್ನು ನಿಗದಿ ಮಾಡಿ ಕರ್ತವ್ಯ ಪಾಲಿಸಲು ಆದೇಶಿಸುತ್ತದೆ ಎಂದರು.
ಜನರ ರಕ್ಷಣೆ ಮಾಡುವುದಾಗಿ ಪೊಲೀಸರು ಪ್ರಾಮಾಣಿಕವಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಬಂದಿರುತ್ತೇವೆ. ಆದರೆ, ಠಾಣಾ ವ್ಯಾಪ್ತಿಯಲ್ಲಿ ಅಪರಾಧಗಳು ನಡೆದ ತಕ್ಷಣ ತಿಳಿಯುವುದಿಲ್ಲ. ಸಾರ್ವಜನಿಕರು ಇಲಾಖೆ ಜತೆ ಸಹಕರಿಸಿದರೆ ಅಪರಾಧ ತಡೆಯಬಹುದು ಎಂದರು.
ಅಂಗಡಿ ಮತ್ತು ಮನೆ ಮುಂದೆ ಸಿಸಿ ಕ್ಯಾಮರಾ ಇದ್ದರೆ ಕಳ್ಳರು ಬರಲು ಹಿಂಜರಿಯುತ್ತಾರೆ. ಸುಲಭವಾಗಿ ಸೆರೆಯಾಗುತ್ತವೆ ಎನ್ನುವ ಕಾರಣಕ್ಕೆ. ಯಾವುದೇ ಊರಿಗೆ ಹೋಗುವ ಮೊದಲು ಮನೆಯಲ್ಲಿ ಒಬ್ಬರು ಇರುವಂತೆ ನೋಡಿಕೊಳ್ಳಬೇಕು. ಎರಡು ಮೂರು ದಿನ ಹೋಗುವುದಾದರೆ ಠಾಣೆಯ ಅಧಿಕಾರಿಗಳ ಗಮನಕ್ಕೆ ತರಬೇಕು. ನಿಮ್ಮ ಚಲನವಲನಗಳನ್ನು ತಿಳಿದವರು ಕಳ್ಳತನ ಮಾಡಲು ಸಾಧ್ಯ. ಹೊಸದಾಗಿ ಯಾರೂ ಕಳ್ಳತನ ಮಾಡಲು ಬರುವುದಿಲ್ಲ ಎಂದರು.
ನಿತ್ಯವೂ ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಹೋಗುವವರು ಆಭರಣಗಳನ್ನು ಧರಿಸಬಾರದು. ನಿಮ್ಮೊಂದಿಗೆ ಒಬ್ಬರು ಇರಲೇಬೇಕು. ಎಟಿಎಂಗಳಲ್ಲಿ ಹೆಚ್ಚು ಹಣ ಬಿಡಿಸಿಕೊಳ್ಳುವವರು ಯಾರಾದರೊಬ್ಬರನ್ನು ಕರೆದುಕೊಂಡು ಹೋಗಬೇಕು ಎಂದರು.
ಪೊಲೀಸರು ನಿಮ್ಮ ಜತೆ ಸದಾಕಾಲ ಇರಲು ಸಾಧ್ಯವಿಲ್ಲ. ನಿಮ್ಮ ಸ್ನೇಹಿತರಂತೆ ಇರುತ್ತಾರೆ. ನಮ್ಮ ಬಗ್ಗೆ ಭಯಬೇಡ, ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಠಾಣೆಗೆ ನೇರವಾಗಿ ಬಂದು ಬಗೆಹರಿಸಿಕೊಳ್ಳಬೇಕು ಎಂದರು. ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿ.ಜಿ.ರುದ್ರೇಶ್, ಮಹಾಬಲರಾವ್ ಇದ್ದರು.