ಚನ್ನಗಿರಿ: ಮೂವರು ಗಂಡು ಮಕ್ಕಳಿದ್ದರೂ ಮರದ ಕೆಳಗೆ ಅನಾಥವಾಗಿದ್ದ ವೃದ್ಧೆಯೊಬ್ಬರನ್ನು ಮಹಿಳಾ ಸಾಂತ್ವನ ಕೇಂದ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಮೊಗ್ಗದ ವೃದ್ಧಾಶ್ರಮಕ್ಕೆ ಸೇರಿಸಿದೆ.
ತಾಲೂಕು ಹೊನ್ನೇಮಾರದಳ್ಳಿ ಗ್ರಾಮದ ಸರೋಜಮ್ಮ (80) ವೃದ್ಧಾಶ್ರಮ ಸೇರಿರುವ ವೃದ್ಧೆ. ಸರೋಜಮ್ಮ ಅವರ ಪತಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವೃತಪಟ್ಟ ನಂತರ ಮಕ್ಕಳ ಮನೆಯಲ್ಲಿ ಆಶ್ರಯ ಪಡೆದರು. ಮೂವರು ಮಕ್ಕಳು ಒಬ್ಬೊಬ್ಬರಾಗಿ ತಾಯಿಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವಂತೆ ಮನೆಯಿಂದ ಹೊರಹಾಕಿದರು.
ತಾಲೂಕು ನುಗ್ಗಿಹಳ್ಳಿ ಗ್ರಾಮದಲ್ಲಿ ಒಂದು ಸಣ್ಣ ಮನೆ ಬಾಡಿಗೆ ಪಡೆದು ಬದುಕುತ್ತಿದ್ದರು. ಆದರೆ, ವಯೋಸಹಜ ಕಾಯಿಲೆ ಬಂದ ನಂತರ ಮಕ್ಕಳ ಮನೆಗೆ ಹೋದಾಗ ಸೇರಿಸಿಕೊಳ್ಳಲಿಲ್ಲ. ಓಡಾಡಲು ಆಗದಿದ್ದಾಗ ನುಗ್ಗಿಹಳ್ಳಿಯ ಮರವೊಂದರ ಕೆಳಗೆ ಆಶ್ರಯ ಪಡೆದರು.
ವೃದ್ಧೆಯನ್ನು ಕಂಡ ಗ್ರಾಮಸ್ಥರು, ಚನ್ನಗಿರಿಯ ಮಹಿಳಾ ಸಾಂತ್ವನ ಹಾಗೂ ಪೊಲೀಸ್ ಇಲಾಖೆಯ ಸಹಾಯವಾಣಿ 112ಕ್ಕೆ ಕರೆಮಾಡಿ ದೂರು ದಾಖಲು ಮಾಡಿದ್ದರು.
ಸ್ಥಳಕ್ಕೆ ಬಂದ ಅಧಿಕಾರಿಗಳು, ಚನ್ನಗಿರಿಯಲ್ಲಿರುವ ವೃದ್ಧೆಯ ಮಗನ ಮನೆಯಲ್ಲಿ ಬಿಡಲು ಹೋದಾಗ ನಿರಾಕರಿಸಿದರು. ವೃದ್ಧೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಕರೆತಂದು ಚಿಕಿತ್ಸೆ ಕೊಡಿಸಿ, ಬುಧವಾರ ಶಿವಮೊಗ್ಗ ವೃದ್ಧಾಶ್ರಮಕ್ಕೆ ಬಿಟ್ಟು ಬಂದಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮೂವರು ಪುತ್ರರು ಹಾಗೂ ಸೊಸೆಯಂದಿರ ವಿರುದ್ಧ ಹಿರಿಯ ನಾಗರಿಕ ಕಾಯ್ದೆ ಅಡಿ ದೂರು ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಪಿಐ ಬಾಲಚಂದ್ರ ನಾಯ್ಕ, ಪಿಎಸ್‌ಐ ರೂಪ್ಲಿಬಾಯಿ, ಮಹಿಳಾ ಸಾಂತ್ವನ ಅಪ್ತಸಮಲೋಚಕಿ ಬಿ.ಎನ್.ನೇತ್ರಾವತಿ, ಕವಿತಾ, ರುಕ್ಮಿಣಿ ಇತರರಿದ್ದರು.