ಜಿಲ್ಲೆ

ತಪ್ಪು ತಿದ್ದಿ ನಡೆದರೆ ಮಾತ್ರ ಕೆಲಸಕ್ಕೆ ಅವಕಾಶ; ವೈದ್ಯರಿಗೆ ಶಾಸಕ ಮಾಡಾಳು ಖಡಕ್ ಸೂಚನೆ

ಚನ್ನಗಿರಿ: ಸರ್ಕಾರಿ ಆಸ್ಪತ್ರೆಯಲ್ಲಿ ಇರುವಂತಹ ಸೌಕರ್ಯ ಬೇರೆಡೆ ಎಲ್ಲೂ ಇಲ್ಲ. ಆದರೆ, ವೈದ್ಯರು ಸರಿಯಾಗಿ ಕೆಲಸ ಮಾಡದಿದ್ದರಿಂದ ಜನ ಸಮಸ್ಯೆಗೆ ಸಿಲುಕುತ್ತಿದ್ದಾರೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕ ಆಸ್ಪತ್ರೆ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಹೇಳಿ ನಾನೇ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ತಿಳಿಸಿದರು.

ಹಣ ಗಳಿಸಬಹುದು. ಆದರೆ, ಆರೋಗ್ಯ ಸಂಪಾದಿಸಲು ಆಗುವುದಿಲ್ಲ. ವೈದ್ಯರನ್ನು ದೇವರು ಎಂದು ನಂಬಿ ಜನ ಬಂದಾಗ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ನಿಮ್ಮ ಬದಲಿಗೆ ಜನಪ್ರತಿನಿಧಿಗಳನ್ನು ನಿಂದಿಸುತ್ತಾರೆ. ಇಲ್ಲಿಯವರೆಗೆ ನಡೆದಿರುವುದನ್ನು ನಾನು ಕೇಳುವುದಿಲ್ಲ. ಒಂದು ತಿಂಗಳ ಒಳಗೆ ತಿದ್ದಿಕೊಂಡು ಕೆಲಸ ಮಾಡದಿದ್ದರೆ ಅಂಥವರ ವಿರುದ್ಧ ಶಿಸ್ತುಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಇಲ್ಲ ನೀವಾಗಿಯೇ ವರ್ಗಾವಣೆ ಬಯಸಿದರೆ ಬಂದರೆ ಕೇಳುವ ಸ್ಥಳಕ್ಕೆ ವರ್ಗ ಮಾಡಿಸುತ್ತೇನೆ ಎಂದರು.

ಪ್ರತಿದಿನ ಪಟ್ಟಣದ ಆಸ್ಪತ್ರೆಗೆ 800ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದು, 11 ವೈದ್ಯರು ಕಾರ್ಯನಿರ್ವಹಿಸುತ್ತಾರೆ. ಆದರೂ ವೈದ್ಯರು ಇಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತದೆ. ಸಮಸ್ಯೆ ಇದ್ದರೆ ಹೇಳಿ, ಆಸ್ಪತ್ರೆಗೆ ಬೇಕಾದ ಎಲ್ಲ ಸವಲತ್ತು ನೀಡಲು ನಾನು ಸಿದ್ಧ. ಆದರೆ, ನೀವು ಕೆಲಸ ಮಾಡದಿದ್ದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.

ಡಾ.ಸಹನಾ ಕಳೆದ ಒಂದು ವರ್ಷದಿಂದ ಸೇವೆಗೆ ಬಂದಿಲ್ಲ. ಅವರಿಗೆ ನೋಟಿಸ್ ನೀಡಿ ಕ್ರಮ ಜರುಗಿಸಬೇಕು. ಅಂತಹ ವೈದ್ಯರ ಅವಶ್ಯಕತೆ ನಮಗೆ ಇಲ್ಲ. ರೋಗಿಗಳು ಬಂದಾಗ ಪ್ರೀತಿಯಿಂದ ಮಾತನಾಡಿದರೆ ರೋಗ ಶೀಘ್ರ ಗುಣಮುಖ ಆಗಲಿದೆ ಎಂದರು.

ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಡಿಎಚ್‌ಒ ಡಾ.ನಾಗರಾಜ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಮುರಳೀಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಡಾ.ರಾಜಪ್ಪ, ಡಾ.ಚನ್ನಕೇಶವ, ಡಾ.ಅಶೋಕ್ ಇದ್ದರು.