ಜಿಲ್ಲೆ

ಯುವ ಮನಸುಗಳಿಗೆ ಕನ್ನಡ ತಲುಪಿಸುವ ಕೆಲಸವಾಗಲಿ

ಚನ್ನಗಿರಿ: ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಸಾಹಿತ್ಯವನ್ನು ಬಲಗೊಳಿಸಬೇಕಿದೆ ಚನ್ನಗಿರಿ ಹಿರೇಮಠ ಶ್ರೀ ಕೇದಾರಲಿಂಗ ಶಾಂತವೀರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ನಾರಶೆಟ್ಟಿಹಳ್ಳಿಯಲ್ಲಿ ಕನ್ನಡ ಅಭಿಮಾನಿ ಬಳಗ ಹಾಗೂ ಕನ್ನಡ ಕಸ್ತೂರಿ ಬಳಗದಿಂದ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವ ಮನಸುಗಳಿಗೆ ಕನ್ನಡ ತಲುಪಿಸುವ ಕೆಲಸ ಕನ್ನಡಿಗರಿಂದ ಆಗಬೇಕಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತಿರುವ ಪಾಲಕರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲು ಮುಂದಾಗಬೇಕು. ಆಂಗ್ಲ ಭಾಷೆ ವ್ಯಾಮೋಹ ಮತ್ತು ತಾಂತ್ರಿಕ ಶಿಕ್ಷಣದ ಪ್ರಭಾವಕ್ಕೊಳಗಾಗಿ ಮಕ್ಕಳನ್ನು ಮಾತೃಭಾಷೆಯಿಂದ ದೂರ ಉಳಿಯುವಂತೆ ಮಾಡಬಾರದು ಎಂದರು.

ಕನ್ನಡ ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಶಂಕ್ರಪ್ಪ ಮಾತನಾಡಿ, ಕನ್ನಡ ಅಭಿಮಾನಿ ಬಳಗದಿಂದ ಪ್ರತಿ ವರ್ಷ 10ನೇ ತರಗತಿ ಕನ್ನಡ ಭಾಷೆಯಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕಸ್ತೂರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದ್ದು, ಈ ಸಾಲಿನಲ್ಲಿ 180 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ ಎಂದರು.

ಕಸಾಪ ಮಾಜಿ ಅಧ್ಯಕ್ಷ ಒ.ಎಸ್.ನಾಗರಾಜ್, ಮಾಜಿ ಕಾರ್ಯದರ್ಶಿ ಚಿನ್ನಸ್ವಾಮಿ, ಡಾ.ರಾಜ್ ಅಭಿಮಾನಿ ಬಳಗದ ಅಧ್ಯಕ್ಷ ಗೌ. ಹಾಲೇಶ್, ಎಲ್‌ಐಸಿ ರಾಜು, ತಿಪ್ಪಣ್ಣ, ಮಹೇಶ್, ಶಂಕರ್, ಸೀನಪ್ಪ, ಚನ್ನಬಸಪ್ಪ ಇದ್ದರು.