ಜಿಲ್ಲೆ

ಹಿಂದು ವಿರಾಟ್ ಗಣಪತಿ ಅದ್ದೂರಿ ಶೋಭಾಯಾತ್ರೆ, ಜಾನಪದ ಕಲಾ ತಂಡಗಳ ಮೆರುಗು

ಚನ್ನಗಿರಿ: ವಿಶ್ವ ಹಿಂದು ಪರಿಷತ್, ಬಜರಂಗದಳ ಪ್ರತಿಷ್ಠಾಪಿಸಿದ್ದ ಹಿಂದು ವಿರಾಟ್ ಗಣಪತಿ ಮೂರ್ತಿ ವಿಸರ್ಜನಾ ಶೋಭಾಯಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಊರ ಬಾಗಿಲ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಗೆ ಬೆಳಗ್ಗೆ ಪೂಜೆ ಸಲ್ಲಿಸಲಾಯಿತು. ಮೂರ್ತಿ ಹೊತ್ತ ಟ್ರಾೃಕ್ಟರ್ ಅನ್ನು ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಸ್ವಲ್ಪ ದೂರ ಚಲಾಯಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಪಟ್ಟಣದ ಕಲ್ಲುಸಾಗರ ರಸ್ತೆ, ಕುರುಬರ ಬೀದಿ, ಮರಾಠ ಬೀದಿ, ಗಣಪತಿ ವೃತ್ತ, ಮಸೀದಿ ರಸ್ತೆ, ಉಪ್ಪಾರ ಬೀದಿ ಮೂಲಕ ಜೆಸಿ ರಸ್ತೆ, ನೃಪತುಂಗ ರಸ್ತೆ, ಹಳೇ ತಾಲೂಕು ಕಚೇರಿ ಮೂಲಕ ಗಣಪತಿ ಹೊಂಡಕ್ಕೆ ಗಣೇಶ ಮೂರ್ತಿ ತಂದು ವಿಸರ್ಜನೆ ಮಾಡಲಾಯಿತು.
ಶೋಭಾಯಾತ್ರೆಯಲ್ಲಿ ವೀರ ಸಾವರ್ಕರ್, ಬಾಲಗಂಗಾಧರ ತಿಲಕ್, ಛತ್ರಪತಿ ಶಿವಾಜಿ ಮಾಹಾರಾಜ್, ವೀರ ಆಂಜನೇಯ, ಕನಕದಾಸರ ಭಾವಚಿತ್ರಗಳ ಮೆರವಣಿಗೆ ಸಾಗಿತು.
ನಾಸಿಕ್ ಡೋಲ್, ತಮಟೆ, ಡೊಳ್ಳು, ವೀರಗಾಸೆ, ಚಿತ್ರದುರ್ಗದ ಬೇಡರ ಪಡೆ, ಆಂಜನೇಯ ವೇಷಧಾರಿಗಳು ಮತ್ತಿತರ ಜಾನಪದ ಕಲಾ ತಂಡಗಳು ಸಾಗಿ ಮೆರುಗು ಹೆಚ್ಚಿಸಿದವು. ವಾದ್ಯಗಳ ಸದ್ದಿಗೆ ಯುವಪಡೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಜನರು ಮನೆ ಬಾಗಿಲ ಮುಂದೆ ನೀರು ಹಾಕಿ ರಂಗೋಲಿ ಬಿಡಿಸಿ ಸ್ವಾಗತ ಕೋರಿದರು. ಬಾಳೆ ಹಣ್ಣು, ನೀರು, ತಂಪು ಪಾನೀಯ ನೀಡಿದರು.
ತಾಲೂಕು ಮತ್ತು ವಿವಿಧ ಕಡೆಗಳಿಂದ 15 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ ಯುವಪಡೆ ಜತೆ ಕುಣಿದು ಕುಪ್ಪಳಸಿ ಮೆರವಣಿಗೆಯ ಕೊನೆಯವರೆಗೂ ಇದ್ದು ಆನಂದಿಸಿದರು.

ವಾಹನಗಳ ನಿಲುಗಡೆಗೆ ವ್ಯವಸ್ಥೆ: ಶೋಭಾಯಾತ್ರೆ ವೀಕ್ಷಿಸಲು ಆಗಮಿಸಿದ್ದ ಜನರ ವಾಹನಗಳ ನಿಲುಗಡೆಗೆ ಪಟ್ಟಣದ ಸುತ್ತ ವ್ಯವಸ್ಥೆ ಮಾಡಲಾಗಿತ್ತು. ಸಂತೇಬೆನ್ನೂರು, ತಾವರೆಕೆರೆ, ಚಿತ್ರದುರ್ಗ, ಹೊಳಲ್ಕೆರೆ ಭಾಗಗಳಿಂದ ಬಂದವರಿಗೆ ಕೆರೆ ಏರಿ ಚೌಡಮ್ಮನ ದೇವಸ್ಥಾನ ಮತ್ತು ಶಿವಮೊಗ್ಗ, ಭದ್ರಾವತಿ, ದಾವಣಗೆರೆ ಭಾಗದವರಿಗೆ ಎಪಿಎಂಸಿ ಪ್ರಾಂಗಣದಲ್ಲಿ ಜಾಗ ನಿಗದಿ ಮಾಡಲಾಗಿತ್ತು. ಪಟ್ಟಣದ ನಿವಾಸಿಗಳಿಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಬಂದೋಬಸ್ತ್‌ಗೆ 400 ಪೊಲೀಸರು

ಚನ್ನಗಿರಿ ಪಟ್ಟಣದ ಸೂಕ್ಷ ್ಮ ಪ್ರದೇಶಗಳನ್ನು ಗುರುತಿಸಿ 30 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಡಿವೈಎಸ್‌ಪಿ 2, ಸಿಪಿಐ 5, ಪಿಎಸ್‌ಐ 19, ಕೆಎಎಸ್ ಆರ್‌ಪಿ 4 ತುಕಡಿ, ಡಿಆರ್ 2 ಮತ್ತಿತರರು ಸೇರಿ 400 ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿತ್ತು ಎಂದು ಸಿಪಿಐ ಪಿ.ಬಿ.ಮಧು ತಿಳಿಸಿದರು.