ಚನ್ನಗಿರಿ: ಕಾಂಗ್ರೆಸ್ ಹೈಕಮಾಂಡ್ ಬಲಿಷ್ಠವಾಗಿದ್ದು, ಸಾಮಾಜಿಕ ನ್ಯಾಯ, ನಿಷ್ಠೆ, ಹಿರಿತನ, ಸಮಾಜಮುಖಿ ಚಿಂತನೆ ಗಮನಿಸಿ ಟಿಕೆಟ್ ಹಂಚಿಕೆ ಪರಿಪಾಟ ಪಕ್ಷದ ಸಿದ್ಧಾಂತವಾಗಿದೆ ಎಂದು ಮಾಜಿ ಶಾಸಕ ವಡ್ನಾಳ್ ರಾಜಣ್ಣ ತಿಳಿಸಿದರು.
ಇಲ್ಲಿನ ಚೆನ್ನಾಮ್ಮಾಜಿ ಸಮುದಾಯ ಭವನದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಬುಧವಾರ ಏರ್ಪಡಿಸಿದ್ದ ನವ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಅಭ್ಯರ್ಥಿಯನ್ನಾಗಿ ಯಾರನ್ನೂ ಘೋಷಿಸಬೇಕೆಂದು ಪಕ್ಷ ನಿರ್ಧರಿಸುತ್ತದೆ. ನಿಷ್ಠಾವಂತ ಕಾರ್ಯಕರ್ತನಾದ ನನ್ನನ್ನು ಕಡೆಗಣಿಸಿಲ್ಲ ಎಂದರು.
ಶಾಸಕನಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಜಾರಿಗೊಳಿಸಿದ ಯೋಜನೆಗಳನ್ನು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದೇನೆ. 2500 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಆದರೂ ಸೋಲು ಅನುಭವಿಸಿದ್ದು ನನ್ನಲ್ಲಿ ನೋವು ತರಿಸಿತ್ತು. ಈ ಕಾರಣಕ್ಕೆ ನಾಲ್ಕು ವರ್ಷ ಮೌನವಾಗಿದ್ದೆ ಎಂದು ಹೇಳಿದರು.
25 ವರ್ಷದಿಂದ ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ, ಕಾಲ್ನಡಿಗೆಯಲ್ಲಿ ಪ್ರತಿಮನೆ ಬಾಗಿಲು ಮುಟ್ಟಿ ಬಂದವನು ನಾನು. ರಾಜಕಾರಣದ ಅರಿವು ತಿಳಿದಿದೆ. ಕಳೆದ ಬಾರಿಯ ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ಶಕ್ತಿ ನನಗೆ ಕಾರ್ಯಕರ್ತರು ನೀಡಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಮಾಜಿ ಅಧ್ಯಕ್ಷ ಡಾ.ವೈರಾಮಪ್ಪ, ಮಾಜಿ ಉಪಾಧ್ಯಕ್ಷ ಮಂಜಪ್ಪ, ಮಾಜಿ ಸದಸ್ಯ ಹೊದಿಗೆರೆ ರಮೇಶ್, ಬಿ.ಎನ್.ವೀರೇಶ್ ನಾಯ್ಕ, ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಡಿ.ಬಸವರಾಜ್, ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್, ಸಂತೇಬೆನ್ನೂರು ಅಧ್ಯಕ್ಷ ಜಬೀವುಲ್ಲಾ, ಮಂಜನಾಯ್ಕ, ಪಾಂಡೋಮಟ್ಟಿ ಲೋಕಣ್ಣ ಇದ್ದರು.