ಜಿಲ್ಲೆ

60 ಸಾವಿರ ಜನರ ನೋಂದಣಿಗೆ ಗುರಿ

Davangere - Desk - Basavaraja P

ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಲಿ I ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಲಹೆ

ಚನ್ನಗಿರಿ: ಮುಂದಿನ ಜಿಲ್ಲಾ, ತಾಲೂಕು ಹಾಗೂ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರೇ ಅಧ್ಯಕ್ಷರಾಗಲಿದ್ದಾರೆ. ಬಿಜೆಪಿ ಪಕ್ಷದ ನಾಯಕರು, ಕಾರ್ಯಕರ್ತರು ಸಂಘಟಿತರಾಗಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವಂಥ ಕೆಲಸ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಸಕನಿದ್ದ ವೇಳೆ ಕ್ಷೇತ್ರದಲ್ಲಿ 55 ಸಾವಿರ ಜನರ ನೋಂದಣಿ ಮಾಡಿಸಲಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಕೋಟೆ ಭದ್ರವಾಗಿದೆ. ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂದೆ ಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರ ಹಿಡಿಯಲಿದೆ. ಸದಸ್ಯತ್ವ ನೋಂದಣಿ ಪ್ರಾರಂಭವಾಗಿದೆ. ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡುವ ಮೂಲಕ 60 ಸಾವಿರ ಸದಸ್ಯರ ನೋಂದಣಿ ಮಾಡಿಸಬೇಕು ಎಂದರು.

ರಾಜ್ಯ ಸರ್ಕಾರವು ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡಿ ಮೀಟರ್ ಅಳವಡಿಸುವ ಉದ್ದೇಶ ಹೊಂದಿದೆ. ಇದರಿಂದ ರೈತರಿಗೆ ತುಂಬ ಅನ್ಯಾಯವಾಗಲಿದೆ. ಸರ್ಕಾರ ಇದನ್ನು ಕೂಡಲೇ ಕೈಬಿಡಬೇಕು. ನಾನು ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸುವ ಕೆಲಸ ಮಾಡಿದ್ದೇನೆ. ರೈತರಿಗೆ ಕೊಳವೆಬಾವಿ ಕೊಡಲಾಗಿದೆ. ಉಳಿದ ರೈತರನ್ನು ಗುರುತಿಸಿ, ಹಕ್ಕುಪತ್ರ ಕೊಡಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಕ್ಷೇತ್ರದ ಎಲ್ಲ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ದಾವಣಗೆರೆ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಕ್ಷೇತ್ರದಲ್ಲಿ ಯುವಕರು ಜೂಜಾಟಗಳಿಗೆ ಬಲಿಯಾಗುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಇದು ಹೀಗೆ ಮುಂದುವರಿದರೆ ಚನ್ನಗಿರಿ ಕ್ಷೇತ್ರ ಜೂಜಾಟದ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಕೆಎಸ್‌ಡಿಎಲ್‌ನಲ್ಲಿ 400 ಕೋಟಿ ಇದ್ದಂತ ವ್ಯವಹಾರ ನನ್ನ ತಂದೆಯವರು ಅಧ್ಯಕ್ಷರಾದ ಬಳಿಕ 1400 ಕೋಟಿ ರೂ.ವರೆಗೆ ಹೆಚ್ಚಿಸಿ, ಸಂಸ್ಥೆ ಬೆಳೆಸಿದರು. ಇದನ್ನು ಸಹಿಸದೆ ನಮ್ಮ ಕುಟುಂಬವನ್ನು ರಾಜಕೀಯವಾಗಿ ತುಳಿಯಬೇಕೆಂಬ ದುರುದ್ದೇಶದಿಂದ ಭ್ರಷ್ಟಾಚಾರದ ಆರೋಪ ಮಾಡಿದರು ಎಂದರು.

ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಕ ಮಾತನಾಡಿ, ಚನ್ನಗಿರಿ ಕ್ಷೇತ್ರದಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷದ ಅಧೀಕೃತ ಕಚೇರಿಯಲ್ಲಿ ಹಮ್ಮಿಕೊಂಡಿರುವ ಸದಸ್ಯತ್ವ ನೋಂದಣಿಯ ಪೂರ್ವಭಾವಿ ಸಭೆ ಅಧಿಕೃತ ಸಭೆಯಾಗಿದೆ. ಯಾರಿಗೂ ಗೊಂದಲ ಬೇಡ ಎಂದು ಹೇಳಿದರು.

ತಾಲೂಕು ಬಿಜೆಪಿ ಪಕ್ಷದ ಮುಖಂಡರಾದ ಕೆ.ಬಸವರಾಜ್, ಮಂಗೇನಹಳ್ಳಿ ಲೋಹಿತ್, ಮೆದಿಕೆರೆ ಸಿದ್ದೇಶ್, ಕೆ.ಆರ್.ಗೋಪಿ, ನಟರಾಜ ರಾಯ್ಕರ್, ದಿಗ್ಗೇನಹಳ್ಳಿ ನಾಗರಾಜ್, ಪಟ್ಲಿ ನಾಗರಾಜ್, ಸೋಮಲಾಪುರ ಶ್ರೀನಿವಾಸ್, ದೇವರಹಳ್ಳಿ ಎ.ಎಸ್. ಬಸವರಾಜಪ್ಪ, ಮಲಹಾಳ್ ಕುಮಾರಸ್ವಾಮಿ, ಗಂಗಗೊಂಡನಹಳ್ಳಿ ಜಗದೀಶ್, ಪಿ.ಬಿ. ನಾಯಕ, ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್ ಇತರರಿದ್ದರು.