ಚನ್ನಗಿರಿ: ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಾಲೂಕಿನ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸಿರಿಗೆರೆ ತರಳಬಾಳು ಜಗದ್ಗರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಚೆನ್ನಾಮ್ಮಾಜಿ ಸಮುದಾಯ ಭವನದಲ್ಲಿ ಶನಿವಾರ ಶ್ರೀ ಬಸವ ಬಳಗ ಆಯೋಜಿಸಿದ್ದ 891ನೇ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಪ್ರತಿ ಗ್ರಾಮಗಳಿಂದ ಕೆರೆಗೆ ನೀರು, ಕೌಟುಂಬಿಕ ಸಮಸ್ಯೆ ಸೇರಿ ಅನೇಕ ದೂರುಗಳು ನಮಗೆ ಬರುತ್ತಿವೆ. ಕಾರ್ಯಕ್ರಮಕ್ಕೆ ಹೋದ ಸಮಯದಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ದೂರು ಪ್ರತಿ ಓದಲು ಸಮಯ ಹಿಡಿಯುತ್ತದೆ. ಅದರ ಬದಲಾಗಿ ಈಗ ಎಲ್ಲ ಯುವಕರ ಬಳಿ ಮೊಬೈಲ್ ಇದೆ. ಒಂದು ಗ್ರೂಪ್ ಮಾಡಿ ಅದರಲ್ಲಿ ನನ್ನ ನಂಬರ್ ಅಡ್ಮಿನ್ ಮಾಡಿ ಸಮಸ್ಯೆಗಳನ್ನು ಅದರಲ್ಲಿ ಹೇಳಿಕೊಂಡರೆ ಅಧಿಕಾರಿಗಳ ಸಭೆ ಕರೆದು ಪರಿಹರಿಸುವ ಕೆಲಸ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ ಈಗಾಗಲೇ 29 ಗ್ರಾಮಗಳ ಯುವಕರ ನಂಬರ್‌ಗಳನ್ನು ಗ್ರೂಪ್ ಮಾಡಲಾಗಿದೆ. ಉಳಿದ 115 ಗ್ರಾಮಗಳ ಯುವಕರು ಭಾನುವಾರ ಸಂಜೆ ಒಳಗೆ ಗ್ರೂಪ್ ಮಾಡಬೇಕು ಎಂದು ತಿಳಿಸಿದರು.
ಚನ್ನಗಿರಿಯಲ್ಲಿ ಕಳೆದ ಬಾರಿ ಕರೆದಿದ್ದಿ ಸಭೆಯಲ್ಲಿ ತಾಲೂಕಿನ ಎಲ್ಲ ಕೆರೆಗಳಿಗೆ ಉಬ್ರಾಣಿ ಏತ ನೀರಾವರಿ ನೀರು ಹರಿಯಬೇಕು. ಜನರಿಗೆ ಅನುಕೂಲವಾಗಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ, ಮೆದುಗೊಂಡನಹಳ್ಳಿ ಕೆರೆಗೆ ನೀರು ಕೊನೆಯಾಗಿ ಮುಂದಿನ ಕೆರೆಗಳಿಗೆ ಹರಿದಿಲ್ಲ ಎಂಬ ದೂರುಗಳು ಬಂದಿವೆ ಎಂದರು.
ತಾಲೂಕಿನ ಎಲ್ಲರೂ ನಿಮ್ಮವರೇ. ನೀವು ಮಾತ್ರವಲ್ಲ, ಎಲ್ಲರೂ ಚೆನ್ನಾಗಿರಬೇಕು. ಗ್ರಾಮದ ಕೆರೆ ಅರ್ಧ ತುಂಬಿದ ನಂತರ ಮುಂದಿನ ಕೆರೆಗೆ ನೀರು ಹೋಗಲು ಬಿಡಬೇಕು. ಇಲ್ಲದಿದ್ದರೆ ಬಸವಣ್ಣನವರಿಗೆ ದ್ರೋಹ ಮಾಡಿದಂತಾಗುತ್ತದೆ. ಶಾಸಕರು ಒಂದು ದಿನಾಂಕ ನಿಗದಿ ಮಾಡಿ ಸಭೆ ಕರೆದರೆ ಎಲ್ಲರೂ ಸೇರಿ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸಮಸ್ಯೆ ಬಾರದಂತೆ ನೋಡಿಕೊಳ್ಳೋಣ ಎಂದರು.
ಬಸವಣ್ಣನವರ ಜಯಂತಿ ಕರ್ನಾಟಕದಲ್ಲಿ ಅಚರಿಸುವುದು ಆಶ್ಚರ್ಯವಲ್ಲ. ಅರಬ್ ದೇಶಗಳಲ್ಲಿ ಆಚರಿಸುತ್ತಿದ್ದಾರೆ. ಬಸವಣ್ಣನ ವಚನಗಳಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಈಗಾಗಲೇ 22 ಸಾವಿರ ವಚನಗಳನ್ನು ಅಂತರ್ಜಾಲಕ್ಕೆ ಅಪ್‌ಲೋಡ್ ಮಾಡಲಾಗಿದೆ. ವಚನ. ತರಳಬಾಳು ಇನ್ ಲಿಂಕ್ ಮೂಲಕ ಕುಳಿತಲ್ಲೇ ಮೊಬೈಲ್‌ನಲ್ಲಿ ನೋಡಬಹುದು ಎಂದರು.
ಶಾಸಕ ಬಸವರಾಜ್ ಶಿವಗಂಗಾ ಮಾತನಾಡಿ, ಜ. 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಹಾಕಿ ನಿತ್ಯವೂ ಪೂಜೆ ಮಾಡುವಂತೆ ಆದೇಶ ಮಾಡಿದ್ದಾರೆ ಎಂದರು.
ಸಾಸ್ವೇಹಳ್ಳಿ ಏತ ನೀರಾವರಿ ಮುಗಿಯುವ ಹಂತದಲ್ಲಿದೆ. ಜಮೀನಿನ ಮಾಲೀಕರು ನ್ಯಾಯಾಲಯದ ಮೊರೆ ಹೋದ ಕಾರಣ ಸ್ವಲ್ಪ ತಡವಾಗಿದೆ. ಈಗಿರುವ ಸಮಸ್ಯೆಗಳು ಬಗೆಹರಿದರೆ ತಾಲೂಕಿನ ಕೆರೆಗಳಿಗೆ ನೀರು ಬರುತ್ತದೆ ಎಂದರು.
ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ಬಸವಣ್ಣ ಯಾವುದನ್ನು ಮಾಡಬಾರದು ಎಂದು ವಚನಗಳಲ್ಲಿ ಹೇಳಿದ್ದಾರೋ ಅದನ್ನೇ ಜನ ಮಾಡುತ್ತಾ ಬಂದಿದ್ದಾರೆ. ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಮೊದಲು ನಾವು ಬದಲಾಗಬೇಕು. ಉತ್ತಮ ಸಮಾಜ ಕಟ್ಟಲು ಬದ್ದರಾಗಬೇಕಿದೆ ಎಂದರು.
ತುಮ್‌ಕೋಸ್ ಅಧ್ಯಕ್ಷ ಆರ್.ಎಂ. ರವಿ. ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಬಸವ ಬಳಗದ ಉಪಾಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಚಂದ್ರಪ್ಪ, ವಡ್ನಾಳ್ ಜಗದೀಶ್, ನಿವೃತ್ತ ಪ್ರಾಂಶುಪಾಲ ರಾ. ವೆಂಕಟೇಶ್ ಶೆಟ್ಟಿ ಇದ್ದರು.