ಚನ್ನಗಿರಿ: ಪಟ್ಟಣದ ಊರ ಬಾಗಿಲ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಭಾನುವಾರ ಸಮಿತಿ ಪದಾಧಿಕಾರಿಗಳು ಧ್ವಜಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸಹಕಾರ್ಯದರ್ಶಿ ರವಿಚಂದ್ರ ಮಾತನಾಡಿ, ಸೆ.19ರಂದು ಗಣೇಶ ಪ್ರತಿಪ್ಠಾಪನೆ ನೆರವೇರಿಸಿ 13 ದಿನಗಳ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಪಟ್ಟಣದ ಗಣಪತಿ ಹೊಂಡದಲ್ಲಿ ಸಂಜೆ ವಿಸರ್ಜನೆ ಮಾಡಲಾಗುತ್ತದೆ ಎಂದರು.
ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ಪ್ರತಿಪ್ಠಾಪನೆಗೆ ಬೇಕಾಗುವ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಅನುಮತಿ ಪಡೆಯಲಾಗುತ್ತದೆ. ಕಾನೂನಿನ ಅಡಿ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದ ರೀತಿ ಹಬ್ಬ ಆಚರಿಸಲಾಗುವುದು ಎಂದರು.
ಹಾಲಸ್ವಾಮಿ ವಿರಕ್ತ ಮಠದ ಡಾ.ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿದರು. ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಹೇಮಚಂದ್ರ, ಶ್ರೀನಿವಾಸ್, ರಂಗನಾಥ್, ಮಧುಸ್ವಾಮಿ, ಅಂಕಿತ್, ರಾಜೇಶ್ ಇದ್ದರು.