ಹೂವಿನಹಿಪ್ಪರಗಿ: ಗ್ರಾಮದ ಪತ್ರಿವನ ಮಠ 12 ಜ್ಯೋರ್ತಿಲಿಂಗಗಳಿರುವ ಪವಿತ್ರ ಐತಿಹಾಸಿಕ ಮಠವಾಗಿದೆ. ಇಂತಹ ಪವಿತ್ರ ಸ್ಥಾನದಲ್ಲಿ ದ್ರಾಕ್ಷಾಯಣಿ ಅಮ್ಮನವರು ಲೋಕ ಕಲ್ಯಾಣಕ್ಕಾಗಿ ಮೌನ ಅನುಷ್ಠಾನ ಕೈಗೊಂಡಿದ್ದು ಸ್ಮರಣೀಯ ಎಂದು ಇಂಗಳೇಶ್ವರ ವಚನ ಶಿಲಾ ಮಂಟಪದ ಚನ್ನಬಸವ ಸ್ವಾಮೀಜಿ ಹೇಳಿದರು.
ಸ್ಥಳೀಯ ಐತಿಹಾಸಿಕ ಪತ್ರಿವನ ಮಠದ ದ್ರಾಕ್ಷಾಯಣಿ ಅಮ್ಮನವರು ಕಳೆದ ಒಂದು ತಿಂಗಳಿಂದ ಲೋಕ ಕಲ್ಯಾಣಕ್ಕಾಗಿ ಅಧಿಕಮಾಸದಲ್ಲಿ ಕೈಗೊಂಡ ಮೌನ ಅನುಷ್ಠಾನದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನ ಸಕಲ ಜೀವ ರಾಶಿಗಳಿಗೆ ಭಗವಂತ ಒಳಿತು ಮಾಡಲಿ ಹಾಗೂ ಸಕಾಲಕ್ಕೆ ಮಳೆಯಾಗಲಿ, ಮಕ್ಕಳು ಕೆಟ್ಟ ಚಟಗಳನ್ನು ತ್ಯಜಿಸಿ ಶಿಕ್ಷಣದಲ್ಲಿ ಸಾಧನೆ ಮಾಡುವಂತಾಗಲಿ ಎನ್ನುವುದು ಮೌನಾನುಷ್ಠಾನದ ಉದ್ದೇಶವಾಗಿದೆ. ಮಕ್ಕಳು ಸಾತ್ವಿಕ ಆಹಾರ ಸ್ವೀಕರಿಸಿ ಉತ್ತಮ ಆರೋಗ್ಯ ಹೊಂದಬೇಕು. ಮೊಬೈಲ್ ಗೀಳನ್ನು ದೂರವಾಗಿಸಿ ಓದಿನ ಕಡೆಗೆ ಹೆಚ್ಚಿನ ಗಮನ ನೀಡುವ ಮೂಲಕ ತಂದೆ-ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂದರು.
ಪತ್ರಿವನ ಮಠದ ದ್ರಾಕ್ಷಾಯಣಿ ಅಮ್ಮನವರು, ಭಂಥನಾಳ ವೃಷಭಲಿಂಗ ಸ್ವಾಮೀಜಿ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಶಾಂತಗೌಡ ನಾಡಗೌಡ, ಎಲ್.ಪಿ.ಚೌಧರಿ, ಪಿ.ಕೆ.ಕೋಲಕಾರ, ಸುಭಾಷ ನಾಡಗೌಡ, ಎಸ್.ಎಂ.ಬುರ್ಲಿ, ಬಸಣ್ಣ ಹಾದಿಮನಿ, ಅಣ್ಣಾರಾಯ ಶಿವಯೋಗಿ ಇತರರಿದ್ದರು. ಪ್ರಕಾಶ ಪಾಟೀಲ ನಿರೂಪಿಸಿದರು.