ಜಿಲ್ಲೆ

ಉತ್ತಮ ಆರೋಗ್ಯಕ್ಕೆ ಜೀವನಶೈಲಿ ಬದಲಿಸಿ: ಯುಎಎಸ್‌ಬಿ ಕುಲಪತಿ ಡಾ. ಸುರೇಶ್ ಹೇಳಿಕೆ

ಬೆಂಗಳೂರು: ಆರೋಗ್ಯ ಸುಧಾರಣೆಗಾಗಿ ನಾಗರಿಕರು ತಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಯುಎಎಸ್‌ಬಿ) ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದರು.

ವಿವಿಯ ಕ್ಯಾಂಪಸ್ ಜಿಕೆವಿಕೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಶೇ.8.2 ಮಂದಿ ಹಸಿವಿನಿಂದ ಬಳಲುತ್ತಿದ್ದು, ಅಂದಾಜು ಪ್ರತಿಶತ 28 ಜನರು ಆಹಾರ ಅಭದ್ರತೆ ಎದುರಿಸುತ್ತಿದ್ದಾರೆ. ಮುಂದಿನ ಪೀಳಿಗೆಗಾಗಿ ಸುರಕ್ಷಿತ ಆಹಾರ, ಸೂಕ್ತ ಆಹಾರದ ಆಯ್ಕೆ, ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣ ಹಾಗೂ ಸಸ್ಯಗಳ ಸಂರಕ್ಷಣೆ ಮಾಡುವುದರಿಂದ ಉತ್ತಮ ಪೌಷ್ಟಿಕ ಆಹಾರ ಪಡೆಯಬಹುದಾಗಿದೆ ಎಂದು ಪ್ರತಿಪಾದಿಸಿದರು.

ಆಡಳಿತ ಮಂಡಳಿ ಸದಸ್ಯ ಡಾ. ಟಿ.ಕೆ.ಪ್ರಭಾಕರ ಶೆಟ್ಟಿ ಮಾತನಾಡಿ, ಸಮತೋಲನ ಆಹಾರ ಮತ್ತು ಜೀವನಶೈಲಿಯನ್ನು ಸಮರ್ಪಕವಾಗಿ ನಿರ್ವಹಿಸುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ಕೃಷಿಕರು ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯಲ್ಲಿ ನಾವೀನ್ಯತೆ, ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಯುಎಎಸ್‌ಬಿ ಕುಲಸಚಿವ ಡಾ. ಕೆ.ಸಿ.ನಾರಾಯಣಸ್ವಾಮಿ, ಆಡಳಿತ ಮಂಡಳಿ ಸದಸ್ಯರಾದ ಡಾ. ಎಚ್.ಎಲ್.ಹರೀಶ್, ಡಾ. ಎಂ.ಚಂದ್ರೇಗೌಡ ಹಾಜರಿದ್ದರು.