ಮೈಸೂರು: ಪ್ರಸ್ತುತ ದಿನಗಳಲ್ಲಿ ಓದುವ ಪರಂಪರೆ ಇದ್ದರೂ ಓದುವ ಕ್ರಮ ಹಾಗೂ ಮಾಧ್ಯಮ ಬದಲಾಗಿದೆ. ಅದಕ್ಕೆ ತಕ್ಕಂತೆ ಓದುಗರನ್ನು ಸೆಳೆಯುವ ಕ್ರಮ ಬದಲಾಗಬೇಕು ಎಂದು ಲೇಖಕಿ ಡಾ.ಶೈಲಜಾ ಹೇಳಿದರು.
ಸಂತ ಫಿಲೋಮಿನಾ ಕಾಲೇಜು, ಕನ್ನಡ ಮತ್ತು ಇತಿಹಾಸ ವಿಭಾಗ, ನವಕರ್ನಾಟಕ ಪ್ರಕಾಶನದಿಂದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಪುಸ್ತಕ ಪ್ರದರ್ಶನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ವಿಶ್ವದಲ್ಲೇ ಭಾರತ ಅಪಾರ ಓದುಗ ವರ್ಗವಿರುವ ದೇಶವಾಗಿದ್ದು, ಓದುಗರು, ಪುಸ್ತಕಗಳ ಸಂಖ್ಯೆಯೂ ದೊಡ್ಡದಿದೆ. ಇತ್ತೀಚಿನ ದಿನಗಳಲ್ಲಿ ಓದುವ ಕ್ರಮ, ಮಾಧ್ಯಮ ಬದಲಾಗಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಲೇಖಕರು, ಪ್ರಕಾಶಕರು ಓದುಗರನ್ನು ತಲುಪುವ ಕ್ರಮ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವಕರು ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಪ್ರತಿಯೊಬ್ಬ ಓದುಗ ತನ್ನ ಓದಿನ ಉದ್ದೇಶ ಅರಿಯಬೇಕು ಎಂದು ಹೇಳಿದರು.
ಲೇಖಕ ಡಾ.ಎಂ.ಎಸ್.ಎಸ್ ಮೂರ್ತಿ ಅನುವಾದಿಸಿರುವ ಪ್ರೊ.ಸಿ.ಎನ್.ಆರ್.ರಾವ್ ಅವರ ಆತ್ಮಕಥನ ‘ವಿಜ್ಞಾನದೊಳಗೊಂದು ಜೀವನ’ ಮತ್ತು ಗಿರಿಧರ್ ಖಾಸನೀಸ್ ಅವರ ಕಥಾಸಂಕಲನ ‘ಎಲ್ಲಿಂದಲೋ ಹಾರಿ ಬಂದು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಸಂತ ಫಿಲೋಮಿನಾ ಕಾಲೇಜಿನ ಮುಖ್ಯಸ್ಥ ಡಾ.ಬರ್ನಾಡ್ ಪಿ.ಬಾರ್ನಿಸ್, ಉಪ ಪ್ರಾಂಶುಪಾಲ ರೊನಾಲ್ಡ್ ಪ್ರಕಾಶ್ ಕುಟಿನ್ಹಾ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎ.ಟಿ.ಸದೆಬೋಸ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್ ಅರುಳಪ್ಪ , ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ಎನ್.ಕೆ.ಸತ್ಯನಾರಾಯಣ, ಸಹಾಯಕ ಪ್ರಾಧ್ಯಾಪಕಿ ಮೇರಿ ನಿವೇದಿತಾ, ಡಾ.ಎಸ್.ಶಿವರಾಜು ಇತರರಿದ್ದರು.