ಜಿಲ್ಲೆ

ಸಾಹಿತ್ಯ ಕ್ಷೇತ್ರದಲ್ಲಿಯೂ ಬದಲಾವಣೆ ಅನಿವಾರ್ಯ: ಜಿ.ಚಿದ್ವಿಲಾಸ್

ಮಡಿಕೇರಿ: ಎಲ್ಲಾ ರಂಗಗಳಲ್ಲಿಯೂ ಬದಲಾವಣೆ ಆಗುತ್ತಿರುವ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿಯೂ ಬದಲಾವಣೆ ಅನಿವಾರ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು.


ಮಡಿಕೇರಿಯ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿತ ಉಪನ್ಯಾಸಕಿ ಮತ್ತು ಲೇಖಕಿ ಕೆ.ಜಯಲಕ್ಷ್ಮಿ ವಿರಚಿತ ಚಪ್ಪಾಳೆಗೂ ಬೆಲೆ ಇದೆ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.


ಸಮಾಜದಲ್ಲಿನ ಪ್ರತೀ ಕ್ಷೇತ್ರವೂ ಆಧುನಿಕ ದಿನಮಾನಗಳ ಬೇಡಿಕೆಗೆ ತಕ್ಕಂತೆ ಬದಲಾವಣೆ ಆಗುತ್ತಿದೆ. ಎಲ್ಲಾ ರಂಗಗಳಲ್ಲಿಯೂ ಹೊಸತನದ ಗಾಳಿ ಬೀಸುತ್ತಿದೆ. ಸಾಹಿತ್ಯ ಕ್ಷೇತ್ರ ಕೂಡ ಅದಕ್ಕೆ ಹೊರತಾಗಿಲ್ಲ. ಸಾಹಿತ್ಯ ರಂಗದಲ್ಲಿಯೂ ಬದಲಾವಣೆ ಅನಿವಾರ್ಯವಾಗಿದೆ. ಮುಖ್ಯವಾಗಿ ಯುವಪೀಳಿಗೆಯನ್ನು ಆಕರ್ಷಿಸುವಂಥ ಸಾಹಿತ್ಯದ ಅನಿವಾರ್ಯತೆ ಇದೆ. ಮಕ್ಕಳಲ್ಲಿ ಆಸಕ್ತಿ ಸಷ್ಟಿಸುವ ಸಾಹಿತ್ಯದ ಆದ್ಯತೆ ಸಾಹಿತಿಗಳದ್ದಾಗಬೇಕಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.


ಕೊಡಗಿನಲ್ಲಿ ಲೇಖಕರಿಗೆ ಸಾಹಿತ್ಯ ಲೋಕದ ಬದಲಾವಣೆ ಮತ್ತು ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಕಮ್ಮಟದ ಅಗತ್ಯವಿದ್ದು ಕನ್ನಡ ಪರ ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.


ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕೊಡಗಿನಲ್ಲಿ ಬರಹಗಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಕ್ಷೇತ್ರದತ್ತ ಒಲವು ತೋರುವ ಮೂಲಕ ಲೇಖಕಿಯರ ಕೊರತೆಯನ್ನು ನೀಗಿಸುತ್ತಿದ್ದಾರೆ. ಈಗಾಗಲೇ ಪರಿಷತ್ ವತಿಯಿಂದ ದಿ.ಗೌರಮ್ಮ ದತ್ತಿ ನಿಧಿ ಪ್ರಶಸ್ತಿಯನ್ನು ೧೮ ಲೇಖಕಿಯರಿಗೆ ಚೊಚ್ಚಲ ಕೃತಿಗಳಿಗಾಗಿ ನೀಡಲಾಗಿದೆ ಎಂದರು.


ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ದಿನದಲ್ಲಿ ಕೆಲ ಹೊತ್ತಾದರೂ ಮಕ್ಕಳನ್ನು ಮೊಬೈಲ್ ನಿಂದ ದೂರವಿರಿಸಬೇಕು. ಅವರಿಗೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವಂಥ ಮಾಹಿತಿಯನ್ನು ಪಾಲಕರು ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.


ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ೧೦ ವರ್ಷಗಳಿಂದ ನೂರಾರು ಲೇಖನಗಳನ್ನು ಬರೆದಿರುವ ಜಯಲಕ್ಷ್ಮಿ ಸಮಾಜಕ್ಕೆ ಉಪಯುಕ್ತವಾಗಬಲ್ಲ ತಮ್ಮ ಅನಿಸಿಕೆಗಳನ್ನು ಚಪ್ಪಾಳೆಗೂ ಬೆಲೆ ಇದೆ ಕೃತಿಯನ್ನು ತನ್ನದೇ ಆದ ಹೇರಂಭ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಈ ಮೂಲಕ ಕೊಡಗಿನ ಸಾಹಿತ್ಯಲೋಕಕ್ಕೆ ಮತ್ತೊಂದು ಪ್ರಕಾಶನ ಸಂಸ್ಥೆಯ ಕೊಡುಗೆ ದೊರಕಿದಂತಾಗಿದೆ ಎಂದರು.


ಲೇಖಕಿ ಕೆ.ಜಯಲಕ್ಷ್ಮಿ ಮಾತನಾಡಿ, ಶಿಕ್ಷಕ ವೃತ್ತಿಯೊಂದಿಗೆ ಬರವಣಿಗೆಯನ್ನೂ ಹವ್ಯಾಸವಾಗಿ ರೂಡಿಸಿಕೊಂಡು ಬಂದಿದ್ದು, ೧೦ ವರ್ಷಗಳಿಂದ ಬೇರೆ ಬೇರೆ ವಿಚಾರಗಳ ಬಗ್ಗೆ ಬರೆದಿರುವ ಲೇಖನಗಳನ್ನೇ ಇದೀಗ ಚಪ್ಪಾಳೆಗೂ ಬೆಲೆ ಇದೆ ಎಂಬ ಪುಸ್ತಕವಾಗಿ ಪ್ರಕಟಿಸಲಾಗಿದೆ. ಚಪ್ಪಾಳೆಯು ಪ್ರತೀಯೋರ್ವ ವ್ಯಕ್ತಿಯ ಜೀವನದಲ್ಲಿಯೂ ಪ್ರೋತ್ಸಾಹದ ಮೂಲಕ ಸಾಧನೆಗೆ ಕಾರಣವಾಗುತ್ತದೆ. ಹೀಗಾಗಿಯೇ ಇದೇ ಶೀಷಿ೯ಕೆಯಲ್ಲಿ ಪುಸ್ತಕ ಪ್ರಕಟಿಸಿ ೪೦ ಲೇಖನಗಳನ್ನು ದಾಖಲಿಸಿದ್ದಾಗಿ ಹೇಳಿದರು.


ತ್ರಿಭಾಷಾ ಸಾಹಿತಿ ಮೊಣ್ಣಂಡ ಶೋಭಾಸುಬ್ಬಯ್ಯ ಮಾತನಾಡಿ, ಆಧುನಿಕ ದಿನಗಳಲ್ಲಿ ಮಕ್ಕಳಲ್ಲಿ ಶಿಸ್ತು ಕಡಮೆಯಾಗಿದೆ. ಆದರೂ ಮಕ್ಕಳಲ್ಲಿ ಅತೀ ಹೆಚ್ಚಿನ ಶಿಸ್ತು ಕೂಡ ಮಾರಕವಾಗಿದೆ. ಇತ್ತೀಚಿನ ಕೆಲವು ಲೇಖಕರ ಬರಹಗಳು ಸ್ವಂತಿಕೆ ಕಳೆದುಕೊಂಡಿದೆ. ಕಂಪ್ಯೂಟರ್ ಜ್ಞಾನದ ಮೂಲಕ ಬರೆದಂತೆ ಕಂಡುಬರುತ್ತಿದೆ. ಜಯಲಕ್ಷ್ಮಿ ಇದಕ್ಕೆ ಅಪವಾದ ಎಂಬಂತೆ ನಮ್ಮ ಸುತ್ತಲಿನಲ್ಲಿಯೇ ಕಾಣುವ ಘಟನೆಗಳ ಆಧಾರದ ಮೇಲೆ ಲೇಖನ ಬರೆಯುತ್ತಾರೆ ಎಂದೂ ಹೆಮ್ಮೆ ವ್ಯಕ್ತಪಡಿಸಿದರು.


ಚಿತ್ರದುರ್ಗದ ಸಿರಿಗನ್ನಡ ಬಳಗದ ಸಂಚಾಲಕ ಚಳ್ಳಕೆರೆ ಯರ್ರಿ ಸ್ವಾಮಿ ಮಾತನಾಡಿ, ಬರಹಗಾರರು ಪ್ರೋತ್ಸಾಹವನ್ನು ಸಮಾಜದಿಂದ ಸಹಜವಾಗಿಯೇ ನಿರೀಕ್ಷಿಸುತ್ತಾರೆ. ಮಾಧ್ಯಮಗಳ ಬೆಂಬಲ ಕೂಡ. ನವಪೀಳಿಗೆಯ ಲೇಖಕರಿಗೆ ಅತ್ಯಗತ್ಯ ಎಂದರಲ್ಲದೇ, ಮೊಬೈಲ್ನಿಂದ ಮಕ್ಕಳನ್ನು ದೂರವಿಡುವ ಅತ್ಯಗತ್ಯವಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಮಕ್ಕಳು ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಓದುವುದನ್ನೇ ಕಡಮೆ ಮಾಡಿದ್ದಾರೆ. ಇದರಿಂದಾಗಿ ಪಾಲಕರು, ಮಕ್ಕಳ ನಡುವಿನ ಭಾವಾನಾತ್ಮಕ ಸಂಬಂಧ ಕಡೆಗಣಿಸಲ್ಪಡುತ್ತಿದೆ ಎಂದು ಹೇಳಿದರು. ತಮ್ಮ ಪಾಲಕರಿಗೆ ಇತ್ತೀಚಿನ ತಂತ್ರಜ್ಞಾನದ ಬಗ್ಗೆ ಏನೂ ಗೊತ್ತಿಲ್ಲ ಎಂಬ ಭಾವನೆ ಮಕ್ಕಳಲ್ಲಿ ಮನೆಮಾಡಿದ್ದು ಹೀಗಾಗಿಯೇ ಹಿರಿಯರನ್ನು ನಿರ್ಲಕ್ಷ್ಯ ದಷ್ಟಿಯಿಂದ ಮಕ್ಕಳು ನೋಡುವಂತಾಗಿದೆ. ಇಂಥ ಕಲ್ಪನೆಗಳಿಗೆ ಅವಕಾಶ ಮಾಡಿಕೊಡದಂತೆ ಹಿರಿಯರು ಗಮನ ಹರಿಸಬೇಕೆಂದು ಸಲಹೆ ನೀಡಿದರು.


ಗಾಯಕರಾದ ಚಿತ್ರಾ ಆರ್ಯನ್, ಅನ್ವಿತ್, ರೇಖಾ ಉಲ್ಲಾಸ್, ಶಾಂತಿ ಅಚ್ಚಯ್ಯ ಮತ್ತು ತಂಡದಿಂದ ಹಾಡುಗಾರಿಕೆ ಜರುಗಿತು. ಲೇಖಕಿ ಕೆ.ಜಯಲಕ್ಷ್ಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಂತಹೆಗಡೆ, ಸಂತೋಷ್ ಕುಡೆಕಲ್, ಲೇಖಕಿ ಪ್ರತಿಮಾರೈ ಇತರರಿದ್ದರು.