ಮಡಿಕೇರಿ:
ಸರ್ಕಾರದ ಅನುದಾನ ಮತ್ತು ಜನರ ದೇಣಿಗೆ ಸಹಾಯದಿಂದ ಮೂಡಿಬರುವ ಮಡಿಕೇರಿ ದಸರಾ ಮಂಟಪಗಳ ಪ್ರದರ್ಶನ ತೀರ್ಪುಗಾರರಿಗೋಸ್ಕರ ಸೀಮಿತವಾದಂತಿರುತ್ತದೆ ಎನ್ನುವುದು ಸಾಮಾನ್ಯ ಆರೋಪ. ಆದರೆ ಈ ಬಾರಿ ಇದಕ್ಕೆ ಬದಲಾವಣೆ ತರಲು ಮಡಿಕೇರಿ ನಗರ ದಸರಾ ಸಮಿತಿ ಮತ್ತು ದಶಮಂಟಪ ಸಮಿತಿ ನಿರ್ಧರಿಸಿದೆ. ಮಡಿಕೇರಿ ದಸರಾಕ್ಕೆ ಆಗಮಿಸುವ ಎಲ್ಲರಿಗೂ ಸಾಧ್ಯವಾದಷ್ಟು ಎಲ್ಲಾ ಮಂಟಪಗಳ ಪ್ರದರ್ಶನ ವೀಕ್ಷಿಸುವ ಅವಕಾಶ ಸಿಗುವಂತಾಗಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎನ್ನುವುದಕ್ಕೆ ದಶಮಂಟಪಗಳ ಶೋಭಾಯಾತ್ರೆ ತನಕ ಕಾಯಬೇಕು.
ಜಗದ್ವಿಖ್ಯಾತ ಮೈಸೂರು ದಸರಾ ಆಚರಣೆ ವಿಜಯದಶಮಿ ದಿನ ಸಂಜೆಗೆ ಮುಗಿದರೆ, ಮಡಿಕೇರಿ ದಸರಾ ಸಂಜೆಯ ನಂತರವಷ್ಟೇ ಕಳೆಗಟ್ಟುತ್ತಾ ಹೋಗುತ್ತದೆ. ರಾತ್ರಿಯಾಗುತ್ತಿದ್ದಂತೆಯೇ ಬಣ್ಣದ ಲೋಕವೇ ತೆರೆದುಕೊಳ್ಳುತ್ತದೆ. ಝಗಮಗಿಸುವ ವಿದ್ಯುತ್‌ದೀಪದ ಬೆಳಕಿನಲ್ಲಿ ಮಂಜುಮುಸುಕಿದ ಮಡಿಕೇರಿಯ ಸೌಂದರ್ಯ ಕಣ್ತುಂಬಿಸಿಕೊಳ್ಳುವುದೇ ಒಂದು ವಿಶೇಷ ಅನುಭವ. ಇದೆಲ್ಲದಕ್ಕೂ ಮತ್ತಷ್ಟು ಜೋಶ್ ತುಂಬುವುದು ದಶಮಂಟಪಗಳ ಮೆರವಣಿಗೆ. ಒಂದಕ್ಕಿಂತ ಒಂದು ಪೈಪೋಟಿ ಮೇಲೆ ತಯಾರಾಗುವ ಮಂಟಪಗಳಿಗೆ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತದೆ. ಪೌರಾಣಿಕ ಕತೆಗಳ ತುಣುಕು ಆಯ್ದುಕೊಂಡು ದೇವ, ದಾನವರ ಪ್ರತಿಕೃತಿ ತಯಾರಿಸಿ ಅದಕ್ಕೆ ಆಧುನಿಕ ತಂತ್ರಜ್ಞಾನಗಳ ಮೂಲಕ ಚಲನವಲನ ಕೊಟ್ಟು ಜೀವ ತುಂಬುವುದು ಈ ಮಂಟಪಗಳ ವಿಶೇಷ.
ಅಬ್ಬರದ ಧ್ವನಿ, ಸಂಗೀತ, ಬೆಳಕು, ಆಕರ್ಷಕ ಪಟಾಕಿಗಳ ಚಿತ್ತಾರ ದಶಮಂಟಪಗಳ ರಂಗನ್ನು ಇನ್ನಷ್ಟೂ ಹೆಚ್ಚಿಸುತ್ತದೆ. ಇದರ ಹಿಂದೆ ಸಾಕಷ್ಟು ಜನರ ಶ್ರಮ ಅಡಗಿರುತ್ತದೆ. ತಿಂಗಳಿಗೂ ಹೆಚ್ಚಿನ ಕಾಲ ಮಂಟಪಗಳ ತಯಾರಿಗೆ ವ್ಯಯಿಸಲಾಗಿರುತ್ತದೆ. ಇಂತಹ ಮಂಟಪಗಳ ಪ್ರದರ್ಶನ ವೀಕ್ಷಿಸಿಸಲು ಕೊಡಗಿನ ವಿವಿಧ ಭಾಗಗಳಿಂದ ಸೇರಿದಂತೆ ರಾಜ್ಯಾದ್ಯಂತದಿಂದ ಜನರು ಬರುತ್ತಾರೆ. ಮೈಸೂರು ದಸರಾಕ್ಕೆ ಬಂದವರ ಪೈಕಿ ಮಡಿಕೇರಿ ಕಡೆಗೆ ಆಗಮಿಸುವವರೂ ಇರುತ್ತಾರೆ. ಅದರಲ್ಲೂ ಯುವಜನತೆಗೆ ಮಡಿಕೇರಿ ದಸರಾ ಎಂದರೆ ಅಚ್ಚುಮೆಚ್ಚು. ಡಿಜೆ ಸಂಗೀತ, ಬಣ್ಣದ ಬೆಳಕಿನ ಲೋಕದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ.
ಅದ್ಧೂರಿಯಿಂದ ತಯಾರಾಗುವ ಮಂಟಪಗಳ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎನ್ನುವುದು ಪ್ರತಿವರ್ಷವೂ ದಸರಾ ಸಂದರ್ಭದಲ್ಲಿ ಕೇಳಿ ಬರುವ ಸಾಮಾನ್ಯ ಆರೋಪ.
ಈ ಮಂಟಪಗಳಲ್ಲಿ ಅತ್ಯುತ್ತಮ ಮಂಟಪಕ್ಕೆ ಬಹುಮಾನವೂ ಇರುವುದರಿಂದ ತೀರ್ಪುಗಾರರ ಮುಂದೆ ಮಾತ್ರ ಪ್ರದರ್ಶನ ನೀಡಲಾಗುತ್ತದೆ ಎನ್ನುವ ದೂರು ಕೂಡ ಇದ್ದಿದ್ದೇ. ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ೧೦ ದೇವಾಲಯಗಳ ಮಂಟಪಗಳಿಗೂ ತೀರ್ಪುಗಾರರಿಗೆ ಪ್ರದರ್ಶನ ನೀಡಲು ಪ್ರತ್ಯೇಕ ಸಮಯ ಮತ್ತು ಸ್ಥಳ ನಿಗದಿ ಮಾಡಲಾಗಿರುತ್ತದೆ. ಇಂತಹ ಸಮಯ ಮತ್ತು ಸ್ಥಳದಲ್ಲಿ ಮಾತ್ರ ಪ್ರದರ್ಶನ ನಡೆಯುತ್ತದೆ. ಬಹುತೇಕ ಮಂಟಪಗಳು ಸಾಮಾನ್ಯವಾಗಿ ತಮ್ಮ ಸಂಪೂರ್ಣ ಪ್ರದರ್ಶನವನ್ನು ತೀರ್ಪುಗಾರರ ಮುಂದೆ ಮಾತ್ರ ಪ್ರದರ್ಶಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.
ನಿಗದಿತ ಸಮಯ ಮತ್ತು ಸ್ಥಳದಲ್ಲಿ ಪ್ರತ್ಯೇಕವಾಗಿ ಮಂಟಪಗಳ ಪ್ರದರ್ಶನ ನಡೆಯುವುದರಿಂದ ದಸರಾಕ್ಕೆ ಆಗಮಿಸಿದ ಎಲ್ಲರಿಗೂ ಎಲ್ಲಾ ಮಂಟಪಗಳ ಪ್ರದರ್ಶನ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಜನ ಸಂದಣಿ, ನೂಕು, ನುಗ್ಗಲು ಇರುವುದರಿಂದಲೂ ಯಾವುದಾದರು ಒಂದು ಮಂಟಪದ ಪ್ರದರ್ಶನ ನೋಡಲು ಸಿಗುವುದು ಕೂಡ ಕಷ್ಟ ಎನ್ನುವ ಸ್ಥಿತಿ ಇರುತ್ತದೆ. ಒಂದೊಂದು ದೇವಾಲಯವೂ ನಗರದ ಒಂದೊಂದು ದಿಕ್ಕಿನಲ್ಲಿ ಇರುವುದರಿಂದ ಎಲ್ಲಾ ದೇವಾಲಯಗಳ ಮಂಟಪಗಳು ಏಕಕಾಲದಲ್ಲಿ ಒಂದೇ ಸ್ಥಳಕ್ಕೆ ಬರುವ ಸಾಧ್ಯತೆಯೂ ತೀರ ಕಡಿಮೆ ಆಗಿರುತ್ತದೆ. ಹಾಗಾಗಿ ಮಡಿಕೇರಿ ದಸರಾಕ್ಕೆ ಆಗಮಿಸುವವರು ತಮಗೆ ಎದುರಾಗುವ ಒಂದು ಅಥವಾ ಎರಡು ಮಂಟಪಗಳನ್ನಷ್ಟೇ ನೋಡಿ, ಮಡಿಕೇರಿ ದಸರಾ ಅಂದರೆ ಇಷ್ಟೇ ಎಂದು ಮರಳುವವರೂ ಇದ್ದಾರೆ.
ಈ ಬಾರಿ ಇಂತಹ ಸ್ಥಿತಿಯನ್ನು ಆದಷ್ಟು ತಪ್ಪಿಸಲು ಮಡಿಕೇರಿ ನಗರ ದಸರಾ ಸಮಿತಿ ಮತ್ತು ದಶಮಂಟಪ ಸಮಿತಿಗಳು ಕಾರ್ಯೋನ್ಮುಖವಾಗಿವೆ. ಒಂದೊಂದು ಮಂಟಪವೂ ಕನಿಷ್ಠ ೪-೫ ಪ್ರದರ್ಶನ ನೀಡುವಂತೆ ಎಲ್ಲಾ ದೇವಾಲಯಗಳ ಮಂಟಪ ಸಮಿತಿಗೂ ಮನವಿ ಮಾಡಿಕೊಳ್ಳಲಾಗಿದೆ. ಅತೀ ಹೆಚ್ಚು ಪ್ರದರ್ಶನ ಕೊಡುವ ಮಂಟಪಗಳಿಗೆ ನಗರ ದಸರಾ ಸಮಿತಿ ವಿಶೇಷ ಬಹುಮಾನವನ್ನೂ ಘೋಷಿಸಿದೆ. ಮಂಟಪಗಳ ಪ್ರದರ್ಶನ ವೀಕ್ಷಿಸಲು ಅನುಕೂಲ ಆಗುವಂತೆ ನಗರದಲ್ಲಿ ಅಲ್ಲಲ್ಲಿ ಗ್ಯಾಲರಿಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ.
ದಶಮಂಟಪಗಳು ತೀರ್ಪುಗಾರರಿಗೆ ಪ್ರತ್ಯೇಕವಾಗಿ ಪ್ರದರ್ಶನ ನೀಡುವ ಸ್ಥಳ ಮತ್ತು ಸಮಯವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಇದೇ ರೀತಿಯಲ್ಲಿ ದಶಮಂಟಪಗಳು ಹೆಚ್ಚುವರಿ ಪ್ರದರ್ಶನ ನೀಡುವ ಸಮಯ ಮತ್ತು ಸ್ಥಳವನ್ನು ಮುಂಚಿತವಾಗಿ ಪ್ರಕಟಿಸಿದರೆ ಮಡಿಕೇರಿ ದಸರಾ ನೋಡಲು ಆಗಮಿಸುವವರಿಗೆ ಅನುಕೂಲ ಆಗುತ್ತದೆ. ನಿರ್ದಿಷ್ಟ ಸ್ಥಳಗಳಲ್ಲಿ ಆಗುವ ಜನದಟ್ಟಣೆ, ನೂಕು ನುಗ್ಗಲಿಗೂ ಕಡಿವಾಣ ಹಾಕಬಹುದು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ. ಈ ಸಂಬಂಧ ಮಡಿಕೇರಿ ನಗರ ದಸರಾ ಸಮಿತಿ ಮತ್ತು ದಶಮಂಟಪ ಸಮಿತಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡರೆ ಮಡಿಕೇರಿ ದಸರಾ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದೆ.