ಜಿಲ್ಲೆ

ಬುದ್ಧ, ಬಸವ, ಅಂಬೇಡ್ಕರ್ ತತ್ವ, ಆದರ್ಶದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ : ಸಿಎಂ ಸಿದ್ದರಾಮಯ್ಯ

ಮೈಸೂರು: ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವ, ಆದರ್ಶ ಹೆಚ್ಚು ಜನರಿಗೆ ತಲುಪಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ರಾಜ್ಯ ಬಿಕ್ಕು ಸಂಘ, ರಾಜ್ಯ ಬೌದ್ಧ ಸಂಘ ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕರ್ ವಾದಿ ಸಂಘ ಸಂಸ್ಥೆಗಳು ಮತ್ತು ವಿಶ್ವಮೇತ್ರಿ ಬುದ್ಧ ವಿಹಾರದ ಸಂಯುಕ್ತಶ್ರಯದಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಬೌದ್ಧ ಮಹಾ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮದು ಜಡ್ಡುಗಟ್ಟಿದ ಸಮಾಜ. ಬುದ್ಧ 2500 ವರ್ಷಗಳ ಹಿಂದೆಯೇ ಸಮಾಜ ಸುಧಾರಣೆಗೆ ಶ್ರಮಿಸಿದರು. ನಂತರ ಬಸವಣ್ಣ ಹಾಗೂ ಅಂಬೇಡ್ಕರ್ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ದೇಶದಲ್ಲಿ ಹಲವಾರು ಸಮಾಜ ಸುಧಾರಕರು ಈ ರೀತಿಯ ಪ್ರಯತ್ನ ಮಾಡಿದ್ದಾರೆ. ಸಮಾಜ ಸುಧಾರಕರು ಪ್ರಯತ್ನ ನಡೆಸಿದಾಗ ಸಮಾಜದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತದೆ. ಮತ್ತೆ ಹಳೆಯ ಸ್ಥಿತಿಗೆ ಮರಳುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮದು ಅಸಮಾನತೆಯಿಂದ ಕೂಡಿದ ಸಮಾಜ. ಸಮ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು. ಶೋಷಿತ ಸಮುದಾಯಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ದೊರೆಯಬೇಕು. ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ದೊರೆಯದೆ ಹೋದರೆ ಸಮಾಜದಲ್ಲಿ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾಯ್ದೆ ಜಾರಿಗೆ ತಂದೆವು. ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಿದೆವು. ಈ ಕಾರ್ಯವನ್ನು ಕೇಂದ್ರ ಸರ್ಕಾರ ಏತಕ್ಕೆ ಮಾಡಲಿಲ್ಲ? ಉಳಿದ ರಾಜ್ಯಗಳು ಏತಕ್ಕೆ ಮಾಡಲಿಲ್ಲ ಎಂಬುದು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

‘ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಇರುವವರೆಗೆ ದೇಶದಲ್ಲಿ ಬದಲಾವಣೆ ಸಾಧ್ಯವಿಲ್ಲ’ ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ. ‘ಅಸಮಾನತೆ ತೊಲಗಿಸದೆ ಹೋದರೆ ಅಸಮಾನತೆಗೆ ಒಳಗಾದವರು ಸ್ವಾತಂತ್ರೃದ ಸೌಧವನ್ನು ಧ್ವಂಸಗೊಳಿಸುತ್ತಾರೆ’ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಆದರೆ, ಇಂದಿಗೂ ಸಹಾ ಪಟ್ಟಭದ್ರಹಿತಾಶಕ್ತಿಗಳು ಸಮ ಸಮಾಜ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಸಮ ಸಮಾಜ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂಬುದು ಮನುವಾದಿಗಳ ಆಶಯವಾಗಿದೆ ಎಂದು ಟೀಕಿಸಿದರು.

ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಅಗುತ್ತದೆ ಎಂದು ಎಲ್ಲರು ಕನಸು ಕಂಡಿದ್ದಾರೆ. ಅಂಬೇಡ್ಕರ್ ಸಹ ಕನಸು ಕಂಡಿದ್ದರು. ಆದರೆ, ದೇಶದಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯುತ್ತಿದ್ದರೂ ಸಮಾಜದಲ್ಲಿ ಬದಲಾವಣೆ ಕಾಣುತ್ತಿಲ್ಲ. ಹಾಗಾಗಿ ಶೋಷಿತ ಸಮುದಾಯದವರಿಗೆ ಶಿಕ್ಷಣದ ಜತೆಗೆ ಅವರಿಗೆ ಆರ್ಥಿಕ ಶಕ್ತಿ ತುಂಬು ಕಾರ್ಯ ಆಗಬೇಕು ಎಂದರು.

ನಾವೆಲ್ಲರು ಸೇರಿ ಗುಲಾಮಗಿರಿ ವ್ಯವಸ್ಥೆಯನ್ನು ಕಿತ್ತೊಗೆಯಬೇಕು. ಕಿತ್ತೊಗೆಯದೆ ಇದ್ದರೆ ನಾವು ಮನುಷ್ಯರಾಗಲು ಸಾಧ್ಯವಿಲ್ಲ. ಸಮಾನ ಮೇಲ್ವರ್ಗದ ಬಡವರಿಗೂ ಗೌರವ ನೀಡುತ್ತದೆ. ಆದರೆ, ಒಬ್ಬ ವಿದ್ಯಾವಂತ ದಲಿತನಿಗೆ ಸಮಾಜ ಗೌರ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೌದ್ಧ ಧರ್ಮಕ್ಕೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಮನವಿಗಳನ್ನು ಪರಿಶೀಲಿಸಿ ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುವುದು. ಸಮ ಸಮಾಜ ನಿರ್ಮಾಣಕ್ಕೆ ಬೇಕಾದ ಎಲ್ಲವನ್ನೂ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೊಳ್ಳೇಗಾಲದ ಚೇತವನ ಬುದ್ಧ ವಿಹಾರದ ಮನೋರಕ್ಕಿತ ಬಂತೇಜಿ, ನಗರದ ಶ್ರೀ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಶಾಸಕರಧ ನರೇಂದ್ರ ಸ್ವಾಮಿ, ಡಿ. ರವಿಶಂಕರ್, ಎ.ಆರ್. ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಡಿ. ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸದಸ್ಯ ವೀರಯ್ಯ, ಮಾಜಿ ಸಚಿವ ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಕಳಲೆ ಕೇಶವಮೂರ್ತಿ, ಎಂ.ಕೆ. ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಎಚ್.ಕೆ. ಕುಮಾರಸ್ವಾಮಿ, ಕಳಲೆ ಕೇಶವಮೂರ್ತಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ರಂಗಸ್ವಾಮಿ ಹಾಗೂ ಇತರರು ಇದ್ದರು.