ಮಡಿಕೇರಿ:
ಗೆಲುವಿನ ಅತಿ ವಿಶ್ವಾಸದಲ್ಲಿ ಇದ್ದ ಬಿಜೆಪಿಗೆ ಕಾಂಗ್ರೆಸ್‌ನ ಇಬ್ಬರು ಯುವ ಅಭ್ಯಥಿಗಳು ಜಿಲ್ಲೆಯಲ್ಲಿ ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ಡಾ. ಮಂಥರ್ ಗೌಡ ಮತ್ತು ಎ.ಎಸ್. ಪೊನ್ನಣ್ಣ ಅವರ ಅಭಿವೃದ್ಧಿ ಮತ್ತು ಬದಲಾವಣೆಯ ಮಾತುಗಳಿಗೆ ಕೊಡಗಿನ ಮತದಾರ ಜೈ ಅಂದಿದ್ದಾನೆ. ಬಿಜೆಪಿಯ ಹಿಂದುತ್ವದ ಮಂತ್ರಕ್ಕೆ ಇಲ್ಲಿ ಫಲ ಸಿಕ್ಕಿಲ್ಲ. ಆದರೆ ಜಾತಿ ರಾಜಕೀಯ ಕೈ ಹಿಡಿದಿರುವ ಮಾತುಗಳು ಕೇಳಿಬರುತ್ತಿದೆ.
ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಾಲಿಗೆ ಮಹತ್ವದ್ದಾಗಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಬಹುತೇಕ ಗ್ರಾ.ಪಂ. ಸದಸ್ಯರಿಂದ ಲೋಕಸಭಾ ಸದಸ್ಯರ ತನಕ
ಜಿಲ್ಲೆಯಲ್ಲಿ ನಾವೇ ಇದ್ದೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಈ ಮೂಲಕ ಗರ್ವಭಂಗ ಆದಂತಾಗಿದೆ. ಈ ಬಾರಿ ಕಾಂಗ್ರೆಸ್ ಸಮರ ತಂತ್ರವನ್ನು ಬಿಜೆಪಿ ಎಂದಿನಂತೆ ನಿರ್ಲಕ್ಷ್ಯ ಮಾಡಿತ್ತು. ಎರಡು ಕ್ಷೇತ್ರಗಳಲ್ಲೂ ಯುವ ಅಭ್ಯರ್ಥಿಗಳು ತಮ್ಮ ಕಾರ್ಯತಂತ್ರವನ್ನು ಕಾರ್ಪೊರೇಟ್ ಶೈಲಿಗೆ ಬದಲಾಯಿಸಿಕೊಂಡರು. ಹೆಚ್ಚು ಪರಿಣಾಮಕಾರಿ ಆಗುವ ರೀತಿಯಲ್ಲಿ ಪ್ರಚಾರ ನಡೆಸಿದರು. ಇದಕ್ಕಾಗಿ ವಿಶೇಷ ವಾರ್ ರೂಂಗಳನ್ನೂ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ನ ಹಿರಿಯರೂ ಬೆನ್ನಿಗೆ ನಿಂತಿದ್ದರಿಂದ ಅವರ ಅನುಭವವೂ ಇಲ್ಲಿ ಕೆಲಸ ಮಾಡಿತು.
ಮಡಿಕೇರಿ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಎ. ಜೀವಿಜಯ ಮತ್ತು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಬಿ.ಎಸ್. ಅನಂತ್‌ಕುಮಾರ್ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಿದ್ದರಿಂದ ಪಕ್ಷಕ್ಕೇನೂ ತೊಂದರೆ ಆಗಿಲ್ಲ. ಹಾಗೆಯೇ ಬಿಜೆಪಿಗೂ ಇದರಿಂದ ಪ್ರಯೋಜನ ಆಗಿಲ್ಲ. ಡಾ. ಮಂಥರ್ ಗೌಡ ವಿರುದ್ಧ ಇವರಿಬ್ಬರೂ ವ್ಯವಸ್ಥಿತವಾಗಿ ಪ್ರಚಾರ ಮಾಡಿಕೊಂಡು ಬಂದರೂ ಅದರ ಬಿಸಿ ತಟ್ಟದ ಹಾಗೆ ಇತರ ಮುಖಂಡರು ನೋಡಿಕೊಂಡರು. ವೈಮನಸ್ಸು ಹೊಂದಿದ್ದ ಟಿಕೆಟ್ ಆಕಾಂಕ್ಷಿತರನ್ನು ಒಟ್ಟಿಗೆ ಕರೆದುಕೊಂಡು ಹೋಗುವಲ್ಲಿ ಸಫಲರಾಗಿದ್ದು ಮಂಥರ್ ಗೌಡ ಅವರಿಗೆ ಆನೆ ಬಲ ಒದಗಿಸಿದಂತಾಯಿತು. ಸಾಮಾನ್ಯವಾಗಿ ಒಬ್ಬರ ಕಾಲು ಒಬ್ಬರು ಎಳೆಯುತ್ತ ತಮ್ಮ ಸೋಲಿಗೆ ತಾವೇ ಕಾರಣರಾಗುತ್ತಿದ್ದ ಕಾಂಗ್ರೆಸಿಗರು ಈ ಬಾರಿ ಅಪರೂಪದ ಒಗ್ಗಟ್ಟು ಪ್ರದರ್ಶನ ಮಾಡಿದ್ದು ಕೂಡ ಮಂಥರ್ ಗೌಡ ಅವರಿಗೆ ಸಕರಾತ್ಮಕವಾಗಿ ಪರಿಣಮಿಸಿತ್ತು.
ನಾಮ ಪತ್ರ ಸಲ್ಲಿಕೆ ನಂತರ ಅಬ್ಬರದ ಪ್ರಚಾರ ನಡೆಸಿದ್ದ ಜೆಡಿಎಸ್‌ನ ನಾಪಂಡ ಮುತ್ತಪ್ಪ ಅವರು ಡಾ. ಮಂಥರ್ ಗೌಡ ಅವರ ನಿದ್ದೆಗೆಡಿಸಿದ್ದು ಸುಳ್ಳಲ್ಲ. ಈ ಬೆಳವಣಿಗೆ ಬಿಜೆಪಿ ಪಾಲಿಗೆ ಖುಷಿಯ ವಿಷಯವಾಗಿತ್ತು. ಜೆಡಿಎಸ್ ಹೆಚ್ಚು ಮತಗಳನ್ನು ಸೆಳೆದಷ್ಟು ತಮಗೆ ಅನುಕೂಲ ಎನ್ನುವುದು ಬಿಜೆಪಿ ಲೆಕ್ಕಾಚಾರ ಆಗಿತ್ತು. ಆದರೆ ಮತದಾನಕ್ಕೆ ಒಂದು ದಿನ ಮೊದಲು ಏಕಾಏಕಿ ನಾಪಂಡ ಮುತ್ತಪ್ಪ ಮೌನವಾಗಿದ್ದು ಮಂಥರ್ ಗೌಡ ಅವರಿಗೆ ಅನುಕೂಲವೇ ಆಯಿತು. ಜೆಡಿಎಸ್‌ಗೆ ಬೀಳಬೇಕಿದ್ದ ಬಹುತೇಕ ಮತಗಳು ಕಾಂಗ್ರೆಸ್ ಪಾಲಾಗುವ ಮೂಲಕ ಗೆಲುವಿನ ಹಾದಿ ಸುಲಭ ಮಾಡಿಕೊಟ್ಟಿತು.
ವಿರಾಜಪೇಟೆ ಕ್ಷೇತ್ರದಲ್ಲಿ ಎ.ಎಸ್. ಪೊನ್ನಣ್ಣ ಗೆಲುವಿನ ಕುದುರೆ ಎಂದೇ ಬಿಂಬಿತರಾಗಿದ್ದರು. ಕ್ಷೇತ್ರದಾದ್ಯಂತ ಅವರಿಗೆ ಸಿಗುತ್ತಿದ್ದ ಬೆಂಬಲ ಬಿಜೆಪಿಗರ ಆತಂಕಕ್ಕೆ ಕಾರಣವಾಗಿತ್ತು. ಹಾಗಾಗಿಯೇ ಪ್ರಚಾರಕ್ಕೆ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ಕರೆತರಲಾಯಿತು. ಆರಂಭದಲ್ಲಿ ಕಾರ್ಯಪ್ಪ ಅವರ ಭಾಷಣ ಬಿಜೆಪಿಗೆ ಅನುಕೂಲ ಆಗುತ್ತಿದೆ ಎಂದೇ ಹೇಳಲಾಗಿತ್ತು. ಆದರೆ ಮಾತಿನ ಮೇಲೆ ಅವರು ಹಿಡಿತ ಕಳೆದುಕೊಂಡಿದ್ದು ಬಿಜೆಪಿಗೆ ನಕರಾತ್ಮಕವಾಗಿ ಪರಿಣಮಿಸಿತು ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲಿಯೂ ಕದ್ದಣಿಯಂಡ ಬೋಪಣ್ಣ ಸೇರಿ ಹಲವು ಮುಖಂಡರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದರೂ ಬೋಪಯ್ಯ ಗೆಲುವುಗೆ ಅನುಕೂಲ ಆಗಲಿಲ್ಲ.
ಮುಸ್ಲಿಂ ಮತಗಳ ವಿಭಜನೆ ಲೆಕ್ಕಾಚಾರವೂ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿಲ್ಲ. ಮಡಿಕೇರಿಯಲ್ಲಿ ಎಸ್‌ಡಿಪಿಐ ಸ್ಪರ್ಧೆಯಿಂದ ಬಿಜೆಪಿಗೆ ಹೆಚ್ಚು ಲಾಭ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಎಸ್‌ಡಿಪಿಐ ಅಭ್ಯರ್ಥಿ ಪಡೆದ ಮತ ಕೇವಲ ೧,೪೩೬. ವಿರಾಜಪೇಟೆಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದ ಮನ್ಸೂರ್ ಅಲಿ ಎಂ.ಎ. ಕೇವಲ ೧,೧೨೧ ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಹಾಗಾಗಿ ಮುಸ್ಲಿಂ ಮತಗಳ ವಿಭಜನೆಯಿಂದ ಆಗಬಹುದಾದ ಲಾಭದ ಲೆಕ್ಕಾಚಾರ ಬಿಜೆಪಿಗೆ ಕೈ ಕೊಟ್ಟಿತು. ಮುಸ್ಲಿಮರು ಒಗ್ಗಟ್ಟಿನಿಂದ ತಮ್ಮ ಮತಗಳನ್ನು ಕಾಂಗ್ರೆಸ್‌ಗೆ ಚಲಾಯಿಸಿದಂತೆ ಕಂಡು ಬರುತ್ತಿದೆ. ಇದು ಕೂಡ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಹಾಯವಾಯಿತು.
ಬಿಜೆಪಿ ಪರ ಪ್ರಚಾರಕ್ಕೆ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ವಿ.ಕೆ. ಸಿಂಗ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಪಕ್ಷದ ಮುಖಂಡ ಸಿ.ಟಿ. ರವಿ ಹೀಗೆ ಘಟಾನುಘಟಿಗಳು ಬಂದು ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಕಾಂಗ್ರೆಸ್‌ನಿಂದ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವೆ ಉಮಾಶ್ರೀ, ಎಸ್‌ಟಿ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ, ನಟ ಸಾಧುಕೋಕಿಲ ಆಗಮಿಸಿ ಪ್ರಚಾರದಲ್ಲಿ ಭಾಗವಹಿಸಿದ್ದರು.
ಬಿಜೆಪಿ ಸರಕಾರದ ವಿರುದ್ಧದ ಶೇ.೪೦ ಭ್ರಷ್ಟಾಚಾರ ಆರೋಪ ಕಾಂಗ್ರೆಸ್‌ಗೆ ಸಕರಾತ್ಮಕವಾಗಿ ಪರಿಣಮಿಸಿತು. ಜಿಲ್ಲೆಯಲ್ಲಿ ಡಿಸಿ ಕಚೇರಿ ಕಾಮಗಾರಿ, ರಸ್ತೆ ಕೆಲಸ ಸೇರಿದಂತೆ ಹಲವು ಕಾಮಗಾರಿಗಳಿಗೂ ಇದೇ ಆರೋಪವನ್ನು ಪರಿಣಾಮಕಾರಿಯಾಗಿ ಅನ್ವಯಿಸುವ ಪ್ರಯತ್ನ ನಡೆಸಲಾಯಿತು. ಗ್ರಾಮೀಣ ರಸ್ತೆಗಳ ದುಸ್ಥಿತಿಯೂ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿತು. ಕಾಂಗ್ರೆಸ್‌ನ ರಚನಾತ್ಮಕ ಟೀಕೆಗಳ ಮುಂದೆ ಬಿಜೆಪಿಯ ಜೈ ಬಜರಂಗಿ ಘೋಷಣೆ, ಹಿಂದುತ್ವ, ಅಭ್ಯರ್ಥಿಗಳ ವಿರುದ್ಧದ ವ್ಯಯಕ್ತಿಕ ಟೀಕೆ ಸೋತು ಹೋಯಿತು. ತಮ್ಮ ವಿರುದ್ಧ ಎಷ್ಟೇ ಟೀಕೆಗಳು ಬಂದರೂ ಅದಕ್ಕೆ ಪ್ರತ್ಯುತ್ತರ ಕೊಡದ ಕಾಂಗ್ರೆಸ್ ಅಭ್ಯರ್ಥಿಗಳು ಅಭಿವೃದ್ಧಿ ಮತ್ತು ಬದಲಾವಣೆಯ ಮಾತನಾಡಿ ಪ್ರಭುದ್ಧತೆ ತೋರಿಸುವ ಮೂಲಕ ಮತದಾರರ ಮನ ಗೆದ್ದರು.
ಕಳೆದ ಎರಡೂವರೆ ದಶಕಗಳಿಂದ ಕೊಡಗಿನಲ್ಲಿ ಗೌಡ ಸಮುದಾಯದವರು ಹೆಚ್ಚು ಇರುವ ಮಡಿಕೇರಿ ತಾಲೂಕಿಗೆ ಕೊಡವ ಸಮುದಾಯದ ಎಂ.ಪಿ. ಅಪ್ಪಚ್ಚು ರಂಜನ್ ಶಾಸಕರಾಗಿ ಆಯ್ಕೆ ಆಗುತ್ತಿದ್ದರೆ, ಕೊಡವ ಸಮುದಾಯದವರು ಹೆಚ್ಚು ಇರುವ ಗೌಡ ಸಮುದಾಯದ ಕೆ.ಜಿ. ಬೋಪಯ್ಯ ಶಾಸಕರಾಗಿ ಆಯ್ಕೆ ಆಗುತ್ತಿದ್ದರು. ಈ ಚುನಾವಣೆಯಲ್ಲಿ ಇದು ಬದಲಾಗಿದ್ದು, ಮಡಿಕೇರಿಗೆ ಗೌಡ ಸಮುದಾಯದ ಡಾ. ಮಂಥರ್ ಗೌಡ ಮತ್ತು ವಿರಾಜಪೇಟೆಗೆ ಕೊಡವ ಸಮುದಾಯದ ಎ.ಎಸ್. ಪೊನ್ನಣ್ಣ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಜಾತ್ಯತೀತ ಪರಂಪರೆಯೊಂದು ಜಿಲ್ಲೆಯಲ್ಲಿ ತೆರೆ ಮರೆಗೆ ಸರಿದಂತಾಗಿದೆ.
ಕಾಂಗ್ರೆಸ್ ಗೆಲುವಿಗೆ ಕಾರಣಗಳು:
ಹೊಸ ಮುಖಗಳಿಗೆ ಟಿಕೆಟ್
ಯುವ ಮತ್ತು ವಿದ್ಯಾವಂತರಿಗೆ ಸ್ಪರ್ಧೆಗೆ ಅವಕಾಶ
ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಹೋರಾಟ
ಬದಲಾವಣೆ ಮತ್ತು ಅಭಿವೃದ್ಧಿ ಮಂತ್ರದ ಜಪ
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್
ಬಿಜೆಪಿ ಭ್ರಷ್ಟಾಚಾರದ ವಿರುದ್ಧ ವ್ಯವಸ್ಥಿತ ಹೋರಾಟ
ಬಿಜೆಪಿ ಹಿನ್ನಡೆಗೆ ಕಾರಣ:
ಮತ್ತೆ ಹಳೆಯ ಮುಖಗಳಿಗೆ ಟಿಕೆಟ್ ಆರೋಪ
ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗದ ಆರೋಪ
೨ನೇ ತಲೆಮಾರಿನ ನಾಯಕತ್ವ ಬೆಳೆಸದ ಆರೋಪ
ಚುನಾವಣೆ ವೇಳೆ ವ್ಯಯಕ್ತಿಕ ಟೀಕೆ
ಅಲ್ಪಸಂಖ್ಯಾತರ ನಿರ್ಲಕ್ಷ್ಯ ಆರೋಪ
ಬಿಜೆಪಿ ಸರ್ಕಾರದ ಶೇ. ೪೦ ಭ್ರಷ್ಟಾಚಾರ ಆರೋಪ