ಚಿಟಗುಪ್ಪ: ಪ್ರಸಿದ್ಧ ಚಾಂಗಲೇರಾ ಗ್ರಾಮದ ಶ್ರೀ ವೀರಭದ್ರೇಶ್ವರರ ಜಾತ್ರೋತ್ಸವ ನವೆಂಬರ್ ೧೦ರಿಂದ ಮೂರು ದಿನಗಳ ಕಾಲ ಜರುಗಲಿದ್ದು, ಈ ಬಾರಿ ಬಹು ವಿಜೃಂಭಣೆಯೊಂದಿಗೆ ವೈಶಿಷ್ಟ್ಯ ಪೂರ್ಣವಾಗಿ ಆಚರಿಸೋಣ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಸುಕ್ಷೇತ್ರ ಚಾಂಗಲೇರಾ ಗ್ರಾಮದ ಶ್ರೀ ವೀರಭದ್ರೇಶ್ವರ ಮಂದಿರದಲ್ಲಿ ಜಾತ್ರೋತ್ಸವ ನಿಮಿತ್ತ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸೇರಿ ತೆಲಂಗಾಣ, ಆಂಧ್ರ, ಮಹಾರಾಷ್ಟ್ರದಿಂದ ಅಪಾರ ಸಂಖ್ಯೆ ಭಕ್ತರು ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ಮಂದಿರದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಊಟ, ವಸತಿ, ವಾಹನ ಪಾರ್ಕಿಂಗ್, ಕಾನೂನು ಸುವ್ಯವಸ್ಥೆ, ಸ್ವಚ್ಛತೆಗೆ ಹೆಚ್ಚಿನ ನಿಗಾವಹಿಸಬೇಕು. ಕುಡಿಯುವ ನೀರು, ಶೌಚಗೃಹ, ಮಹಿಳೆಯರಿಗೆ ಪ್ರತ್ಯೇಕ ಸ್ನಾನದ ವ್ಯವಸ್ಥೆ, ಬೆಳಕಿನ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ನಿರ್ಮಿಸಬೇಕು ಎಂದರು.
ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ್ ಜೈನ್ ಮಾತನಾಡಿ, ವೀರಭದ್ರೇಶ್ವರ ಮಂದಿರಕ್ಕೆ ಅತೀ ದೊಡ್ಡ ಭಕ್ತ ಸಮೂಹವಿದ್ದು, ಜಾತ್ರೋತ್ಸವ ಸಮಯದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ತಹಸೀಲ್ದಾರ್ ಮಂಜುನಾಥ ಪಂಚಾಳ ಮಾತನಾಡಿ, ವೀರಭದ್ರೇಶ್ವರ ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲರ ಸಹಾಯ ಸಹಕಾರ ಅತ್ಯಗತ್ಯವಾಗಿದ್ದು ಪ್ರತಿಯೊಬ್ಬ ಭಕ್ತರು, ದೇವಸ್ಥಾನದ ಸಿಬ್ಬಂದಿ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಸೇರಿ ಆಚರಿಸೋಣ ಎಂದರು.
ಚಾಂಗಲೇರಾ-ಚಿಟಗುಪ್ಪ ಶ್ರೀ ಗುರು ಅಯ್ಯಪ್ಪಸ್ವಾಮಿ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಆರ್ಶೀವಚನ ನೀಡಿದರು. ಶ್ರೀ ಮುರುಳಾರಾಧ್ಯ ಶಿವಾಚಾರ್ಯರು, ತಾಪಂ ಇಒ ಲಕ್ಷ್ಮೀ ಬಿರಾದಾರ, ದೇವಸ್ಥಾನ ಆಡಳಿತಾಧಿಕಾರಿ ಅನಂತರಾವ ಕುಲಕರ್ಣಿ, ಕಾರ್ಯದರ್ಶಿ ಸಂಜಯ ದೇಸಾಯಿ ಇತರರಿದ್ದರು.