ಚಂದ್ರಯಾನ-3 ಯಶಸ್ಸಿನ ಹಿಂದೆ ದೇಶದ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ನಗರ ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್ ಖಂಡಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಸಾಕಷ್ಟು ಉಪಗ್ರಹಗಳು ಉಡಾವಣೆಗೊಂಡವು. ಬೆಂಗಳೂರಿನ ಇಸ್ರೋ ಬಾಹ್ಯಾಕಾಶ ಕೇಂದ್ರ ಇಂದಿರಾಗಾಂಧಿ ಅವರ ಕೊಡುಗೆಯಾಗಿದೆ. ಹೀಗಾಗಿ ಪ್ರಧಾನಿ ತಮ್ಮ ಭಾಷಣದ ವೇಳೆ ಅವರನ್ನು ಸ್ಮರಿಸಬೇಕಾಗಿತ್ತು. ಜತೆಗೆ, ವಿಕ್ರಂ ಸಾರಾಭಾಯಿ, ಸತೀಶ್ ಧವನ್, ಯು.ಆರ್.ರಾವ್ ಅವರ ಹೆಸರನ್ನಾದರೂ ಹೇಳಬೇಕಾಗಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖಂಡರಾದ ನವೀದ್ ಪಾಷ, ಕುರಬಾರಹಳ್ಳಿ ಪ್ರಕಾಶ್, ಎಸ್.ಎ.ರಹೀಂ, ರಾಮಣ್ಣ ಹಾಜರಿದ್ದರು.