ಹುಬ್ಬಳ್ಳಿ : ಇಲ್ಲಿನ ಉಣಕಲ್ಲನಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ರ್ಚಚಿಸಿ, 25 ಕೋಟಿ ರೂ.ಗಳನ್ನು ಮುಂದಿನ ಬಜೆಟ್ನಲ್ಲಿ ಮಂಜೂರು ಮಾಡಿಸುವ ಜವಾಬ್ದಾರಿಯನ್ನು ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿ ವಹಿಸಿಕೊಂಡಿದೆ.
ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಮಹಾನಗರ ಪಾಲಿಕೆ ಕಚೇರಿಯಲ್ಲಿ ವಿಧಾನಸಭೆ ಉಪಾಧ್ಯಕ್ಷ ಹಾಗೂ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ ಮತ್ತು ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಸಭೆ ನಡೆಸಿದರು.
ನಂತರ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ರುದ್ರಪ್ಪ ಲಮಾಣಿ, ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುವುದಿಲ್ಲ ಎಂಬ ಆತಂಕ ಬೇಡ. ಈಗಾಗಲೇ ಸಮಿತಿ ನೀಡಿದ ಅನೇಕ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸರ್ಕಾರ ಅನುದಾನ ನೀಡಿದೆ. ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿ ಬಗ್ಗೆಯೂ ಮುಖ್ಯಮಂತ್ರಿಯವರೊಂದಿಗೆ ರ್ಚಚಿಸಿ, ಅನುದಾನ ಬಿಡುಗಡೆಗೊಳಿಸುವ ಜವಾಬ್ದಾರಿ ನನ್ನದು ಎಂದು ಹೇಳಿದರು.
ದೇವಸ್ಥಾನದ ಸುತ್ತಲೂ ಇರುವ 54 ಮನೆಗಳ ಮಾಲೀಕರು ದೇವಸ್ಥಾನದ ಅಭಿವೃದ್ಧಿಗಾಗಿ ಜಾಗ ನೀಡಲು ಒಪ್ಪಿಕೊಂಡಿದ್ದಾರೆ. ದೇವಸ್ಥಾನದ ಮುಂಭಾಗ ಹಾಗೂ ಹಿಂಭಾಗಕ್ಕೆ ಉತ್ತಮ ಸಂಪರ್ಕ ರಸ್ತೆ ಕಲ್ಪಿಸುವ ಜತೆಗೆ ಉದ್ಯಾನ, ಶೌಚಾಲಯ, ರ್ಪಾಂಗ್, ಅಂಗಡಿಗಳು ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ದೇವಸ್ಥಾನದ ಸುತ್ತಲೂ ಇರುವ ಮನೆಗಳನ್ನು ಎ, ಬಿ, ಸಿ ಎಂದು ವಿಂಗಡಿಸಲಾಗಿದೆ. ಬೇರೆ ಕಡೆ ಮನೆ ಕಟ್ಟಿಕೊಳ್ಳಲು ಆಗದವರಿಗೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಸಿಕೊಡಲಾಗುವುದು. ಬೇರೆ ಕಡೆ ಮನೆ ಕಟ್ಟಿಕೊಳ್ಳಲು ಇಚ್ಛಿಸುವವರಿಗೆ ಹಣ ನೀಡಲಾಗುವುದು ಎಂದರು.
ಇದಕ್ಕೂ ಮೊದಲು ಶಾಸಕರು ಹಾಗೂ ಸಮಿತಿ ಸದಸ್ಯರಾದ ಎಸ್. ಸುರೇಶಕುಮಾರ, ಎ. ಮಂಜು. ಸಿ.ಎನ್. ಬಾಲಕೃಷ್ಣ, ಎಚ್.ಡಿ. ತಮ್ಮಯ್ಯ, ಡಾ. ಅವಿನಾಶ ಜಾಧವ, ದರ್ಶನ ಪುಣ್ಣಯ್ಯ ಅವರು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಲಗಿ ಹಾಗೂ ಇತರರು ಇದ್ದರು.