ಕಿಕ್ಕೇರಿಯಲ್ಲಿ ಗುರುವಾರ ಹೊನ್ನಾಲಮ್ಮ ದೇಗುಲ ಪ್ರತಿಷ್ಠಾಪನೆ ಅಂತಿಮದಿನದ ಚಂಡಿಕಾ ಹೋಮ ಜರುಗಿತು. 
ಜಿಲ್ಲೆ

ಹೊನ್ನಾಳಮ್ಮ ದೇಗುಲದಲ್ಲಿ ಚಂಡಿಕಾಹೋಮ

ಕಿಕ್ಕೇರಿ: ಇಲ್ಲಿನ ಜನಾರ್ದನಸ್ವಾಮಿ ದೇಗುಲ ಬೀದಿಯಲ್ಲಿರುವ ಹೊನ್ನಾಳಮ್ಮ ದೇಗುಲ ಲೋಕಾರ್ಪಣೆ ಮಹೋತ್ಸವ 3ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ಆರಂಭವಾದ ದೇಗುಲ ಪ್ರತಿಷ್ಠಾಪನಾ ಮಹೋತ್ಸವ ಗುರುವಾರ ಚಂಡಿಕಾಹೋಮದೊಂದಿಗೆ ಸಂಪನ್ನಗೊಂಡಿತು. ಅಗ್ನಿದೇವನಿಗೆ ಮಂಗಳದ್ರವ್ಯ, ಅಷ್ಟದ್ರವ್ಯ, ಫಲತಾಂಬೂಲ ಅರ್ಪಿಸಿ ಗ್ರಾಮ ಸುಭಿಕ್ಷತೆಗೆ ಪ್ರಾರ್ಥಿಸಲಾಯಿತು. ಹೋಮದ ತಿಲಕಪ್ರಸಾದವನ್ನು ಭಕ್ತರಿಗೆ ನೀಡಲಾಯಿತು.

ಹೊನ್ನಾಳಮ್ಮ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ.ಎಚ್. ಮೋಹನ್‌ಕುಮಾರ್ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹೊನ್ನಾಳಮ್ಮ ದೇವಿ ಜತೆ ವೀರಭದ್ರೇಶ್ವರ, ಲಕ್ಷ್ಮೀದೇವಿ ದೇವರನ್ನು ಪ್ರತಿಷ್ಠಾಪಿಸಲಾಯಿತು.

ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅಮೃತ ಹಸ್ತದಿಂದ ಅರ್ಚಕ ಪ್ರಸನ್ನ ಹೊಳ್ಳ ಮಾರ್ಗದರ್ಶನದಲ್ಲಿ ವಿವಿಧ ಬಗೆಯ 120 ಹೋಮಗಳು ಅವಿರತವಾಗಿ ಜರುಗಿದವು.

ಬುಧವಾರ ರಾತ್ರಿ ಆಶ್ಲೇಷ ಬಲಿ ಪೂಜೆಗೆ ಗ್ರಾಮದ ಸುತ್ತಮುತ್ತಲ ಭಕ್ತರು ಭಾಗವಹಿಸಿ ಸರ್ಪದೋಷ ಪರಿಹಾರಕ್ಕೆ ದೇವರಲ್ಲಿ ಮೊರೆ ಇಟ್ಟರು. ಅಂತಿಮ ದಿನವಾದ ಗುರುವಾರ ಜರುಗಿದ ಚಂಡಿಕಾಹೋಮದಲ್ಲಿ ಅಧಿಕ ಭಕ್ತರು ಭಾಗವಹಿಸಿ ಹೋಮಕುಂಡಕ್ಕೆ ಅಷ್ಟದ್ರವ್ಯ, ಫಲತಾಂಬೂಲ ಅರ್ಪಿಸಿ ಗ್ರಾಮ ಸಂರಕ್ಷಣೆ, ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.

ದೇವಿಯನ್ನು ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಂಟ ದೇವರಾದ ದೊಡ್ಡಯ್ಯ, ಚಿಕ್ಕಯ್ಯ, ಹಳದಿರಣ್ಣ ದೇವರಿಗೆ ನೈವೇದ್ಯ ಅರ್ಪಿಸಿ ಗ್ರಾಮ ರಕ್ಷಣೆಗೆ ಮೊರೆ ಇಡಲಾಯಿತು.

ಕಳಸಸೇವೆ, ಹೂವಿನ ಅಲಂಕಾರ ಸೇವೆ, ತ್ರೀಮಧುರ ಸಮರ್ಪಣೆ, ಗುಡಾನ್ನ ಸಮರ್ಪಣೆ, ಆಶ್ಲೇಷ ಸೇವೆ, ವಸ್ತ್ರ ಸಮರ್ಪಣೆ, ಪಂಚಕಜ್ಜಾಯ ಸೇವೆ, ಸರ್ಪ ಸಂಸ್ಕಾರ, ಆಶ್ಲೇಷ ಪೂಜೆ, 108ಕಳಸ ಪ್ರತಿಷ್ಠೆ ಸ್ವಸ್ತ್ರಿ ಪುಣ್ಯಾಹವಾಚನ, ಪ್ರಸನ್ನ ಪೂಜೆ, ಕಲಶಾಭಿಷೇಕ, ಅಷ್ಟಬಂಧ ಲೇಪನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದಂತಹ ವಿವಿಧ ಪೂಜಾ ವಿಧಿ-ವಿಧಾನ ಜರುಗಿದವು.

ನಿತ್ಯ ವೀರಭದ್ರ ಕುಣಿತ, ಚಂಡೆ ಮದ್ದಳೆಯಂತಹ ವಿವಿಧ ಜಾನಪದ ಕಲಾಪ್ರಕಾರಗಳ ವಾದನ ಭಕ್ತರ ಕಿವಿಗೆ ಇಂಪು ನೀಡಿತು.