ಮೈಸೂರು: ಯುವ ಸಮುದಾಯದಲ್ಲಿ ಇಂದು ಗೆಲ್ಲುವ ದಾವಂತ ಹೆಚ್ಚಾಗಿದೆ. ಗೆಲ್ಲುವ ಹಂತದಲ್ಲಿನ ಪ್ರಕ್ರಿಯೆ ಮತ್ತು ಸೋಲನ್ನು ಆನಂದಿಸುವ ಮನೋಭಾವವನ್ನೇ ತೊರೆದು ಬಿಟ್ಟಿದ್ದಾರೆ ಎಂದು ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ರಂಗಕರ್ಮಿ ಚಂದ್ರು ಮಂಡ್ಯ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಹಾಗೂ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ( ಸ್ವಾಯತ್ತ) ವತಿಯಿಂದ ತಾಲೂಕಿನ ಬಸವನಹಳ್ಳಿ (ಗದ್ದಿಗೆ) ಗ್ರಾಮದಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಜನರಲ್ಲಿ ಗೆಲುವು ಒಂದೇ ಮಾನದಂಡ ಎಂದು ಕೆಲವು ಪೋಷಕರು ಬಯಸುತ್ತಿದ್ದಾರೆ. ಗೆಲುವು ಕ್ಷಣಿಕವಾದ ಮನೋಲ್ಲಾಸ ಮತ್ತು ಸಂತೋಷವನ್ನು ನೀಡುತ್ತದೆ. ಆದರೆ ಗೆಲ್ಲುವ ಹಂತದಲ್ಲಿ ಸಾವಿರಾರು ಪ್ರಕ್ರಿಯೆಯನ್ನು ಆನಂದಿಸುವುದನ್ನು ಯುವ ಜನತೆ ಮತ್ತು ಪೋಷಕರು ಮರೆತಿದ್ದಾರೆ. ಮಕ್ಕಳಿಗೆ ಕೂಡು ಕುಟುಂಬದ ಪರಿಕಲ್ಪನೆ ಮೂಡುವಂತೆ ಪೋಷಕರು ನಡೆದುಕೊಳ್ಳಬೇಕು. ಗುರು ಹಿರಿಯರಲ್ಲಿ ಭಯ, ಭಕ್ತಿ ಮತ್ತು ವಿಧೇಯತೆಯಿಂದ ಇರಬೇಕೆಂದು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ರೂಡಿ ಮಾಡಬೇಕು ಎಂದರು.
ಯುವ ಸಮುದಾಯ ಸಾಧ್ಯವಾದಷ್ಟು ಹೃದಯ ವೈಶಾಲ್ಯತೆ ಹೊಂದುವ ಕಡೆ ಗಮನಹರಿಸಬೇಕು. ತೀರಾ ವೈಯಕ್ತಿಕ ಮತ್ತು ಕೌಟುಂಬಿಕ ನೆಲೆಯನ್ನು ಮೀರಿ ಸಾಮಾಜಿಕ ನೆಲೆಯಲ್ಲಿ ಬದುಕುವುದನ್ನು ಕಲಿಯಬೇಕು. ಜಾತಿ, ಧರ್ಮಗಳನ್ನು ಮೀರಿ ವಿಶ್ವ ಕವಿ ಕುವೆಂಪುರವರ ಆಶಯದಂತೆ ವಿಶ್ವ ಮಾನವರಾಗುವ ಕಡೆ ಸಾಗಬೇಕು ಎಂದರು.
ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಿರ್ದೇಶಕ ಎನ್. ತೇಜಸ್ವಿ, ಅಂತಾರಾಷ್ಟ್ರೀಯ ಜನಪದ ಕಲಾವಿದ ಅಮ್ಮ ರಾಮಚಂದ್ರ, ಪ್ರಾಂಶುಪಾಲರಾದ ಡಾ. ಎಸ್. ಪ್ರತಿಭಾ, ಕಲಾವಿದ ಎನ್. ಸ್ವಾಮಿ, ಬಸವನಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಸವಿತಾ, ಗ್ರಾಮಸ್ಥರಾದ ಎನ್. ಕುಂಟೇಗೌಡ, ಸ್ವಾಮಿಗೌಡ ಇದ್ದರು.
ಉದ್ಘಾಟನೆ ಕಾರ್ಯಕ್ರಮದ ನಂತರ ಚಂದ್ರು ಮಂಡ್ಯ ನಿರ್ದೇಶನದ ಡಾ. ಬೆಸಗರಹಳ್ಳಿ ರಾಮಣ್ಣನವರ ’ಗಾಂಧಿ’ ಮತ್ತು ಡಾ. ವೀಣಾ ಶಾಂತೇಶ್ವರವರ ’ನಿರಾಕರಣೆ’ ಕಿರುಚಿತ್ರ ಪ್ರದರ್ಶನ ಮತ್ತು ಸಂವಾದ ನೆರವೇರಿತು.