ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಕುಲಸಚಿವೆ ಪ್ರೊ.ಆರ್. ಸುನಂದಮ್ಮ ಸಹಜ, ಸ್ನೇಹಶೀಲ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸದ ಪ್ರತೀಕ ಎಂದು ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಬಣ್ಣಿಸಿದರು.
ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ನಾಗರಿಕ ಸನ್ಮಾನ ಸಮಿತಿಯಿಂದ ಆಯೋಜಿಸಿದ್ದ ಪ್ರೊ.ಆರ್.ಸುನಂದಮ್ಮ ಅಭಿನಂದನೆ ಸಮಾರಂಭದಲ್ಲಿ ಸಮನ್ವಿತೆ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸುನಂದಮ್ಮ ಅವರನ್ನು ಮೂರು ವಿಧದಲ್ಲಿ ನಾನು ಗಮನಿಸಿದ್ದೇನೆ. ಅವರೊಬ್ಬ ವ್ಯಕ್ತಿಯಾಗಿ ಸಹಜ, ಸ್ನೇಹಶೀಲ ವ್ಯಕ್ತಿತ್ವ. ಆತ್ಮವಿಶ್ವಾಸದ ಪ್ರತೀಕ. ಸಂಶೋಧಕಿಯಾಗಿ ಅವರು ಬರೆದ ಸಾಕಷ್ಟು ಬರಹಗಳು ಸಮಕಾಲೀನ ಅಭಿವೃದ್ಧಿಗೆ ಪೂರಕವಾಗಿವೆ. ಒಬ್ಬ ಕಾರ್ಯಕರ್ತೆಯಾಗಿ ಮಹಿಳೆ ಪರ ಧ್ವನಿ ಎತ್ತಿದವರು. ಮಹಿಳಾ ಸಬಲೀಕರಣ, ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅವರು ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು.
ಅಭಿನಂದನಾ ಭಾಷಣ ಮಾಡಿದ ಪುಣೆಯ ಸಿಂಬಯಾಸಿಸ್ ಕಾನೂನು ಶಾಲೆ ನಿರ್ದೇಶಕಿ ಡಾ.ಶಶಿಕಲಾ ಗುರುಪುರ, ಮಹಿಳಾ ಸಮುದಾಯದ ಅಭಿವೃದ್ಧಿಯಲ್ಲಿ ತನ್ನ ಆನಂದವನ್ನು ಕಾಣುವ ಪ್ರೊ.ಆರ್.ಸುನಂದಮ್ಮ ಅವರು ಸಮಾಜದಲ್ಲಿ ಮಹಿಳೆಯರ ವಿರುದ್ಧ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ. ಮಹಿಳೆಯರ ಸಬಲೀಕರಣಕ್ಕೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುಂದುವರೆಯುವ ಛಲಗಾರ್ತಿ ಎಂದರು.
ಹೈದರಾಬಾದ್‌ನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಡೀನ್, ಸ್ಕೂಲ್ ಆಫ್ ಆರ್ಟ್ಸ್ ಮತ್ತು ಸಮಾಜ ವಿಜ್ಞಾನ ಹಾಗೂ ಮಹಿಳಾ ಶಿಕ್ಷಣ ವಿಭಾಗದ ಪ್ರೊ.ಶಾಹಿದಾ ಮಾತನಾಡಿ, ಪ್ರೊ.ಸುನಂದಮ್ಮ ಅವರ ಕಾರ್ಯ, ಸಲ್ಲಿಸಿದ ಸೇವೆ, ಅವರ ಹೋರಾಟದ ದಾರಿಯ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ ಎಂದರು.
ಅಭಿನಂದನೆ ಗ್ರಂಥದ ಪ್ರಕಾಶಕಿ ಡಾ.ಎಚ್.ಎಸ್.ಅನುಮಪಮಾ ‘ಗೆಜ್ಜೆ ಮಾತಾಡು, ಮಾತಾಡೆ ಮೌನವೇ, ಮಾತಾಡೆ ಮಲ್ಲಿಗೆ….. ಎಂಬ ಹಾಡಿನೊಂದಿಗೆ ಭಾಷಣ ಆರಂಭಿಸುತ್ತ, ಹೆಜ್ಜೆ- ಗೆಜ್ಜೆ ಮಾತಾಡಿದಾಗ ಸಮನ್ವಿತೆ ಎಂಬ ಅಭಿನಂದನೆ ಪುಸ್ತಕ ಹೊರಬರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಸಾಮಾಜಿಕ ಹೋರಾಟಗಾರ್ತಿ ಡಾ. ದು. ಸರಸ್ವತಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಹಕಾರ್ಯದರ್ಶಿ ರವಿ ಕಿತ್ತೂರು, ಉಪನ್ಯಾಸಕಿ ಲಲಿತಾ ಬಿಜ್ಜರಗಿ, ಡಾ.ಗಿರಿಜಾ ಅಕ್ಕಿ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಯಲ್ಲಮ್ಮ ಅನಿಸಿಕೆ ಹಂಚಿಕೊಂಡರು.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವೇದಿಕೆ ವತಿಯಿಂದ ಮಹಿಳಾ ವಿವಿ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅವರ ನೇತೃತ್ವದಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ಕೌದಿ ಹೊದಿಸಿ ಪ್ರೊ.ಆರ್.ಸುನಂದಮ್ಮ ಮತ್ತು ಅವರ ಪತಿ ಗಣೇಶ ಬಿ.ಆರ್.ಅವರನ್ನು ಸನ್ಮಾನಿಸಲಾಯಿತು.
ನಾಗರಿಕ ಸನ್ಮಾನ ಸ್ವೀಕರಿಸಿದ ಪ್ರೊ.ಸುನಂದಮ್ಮ ಮಾತನಾಡಿ, ಈ ನಾಗರಿಕ ಸನ್ಮಾನದ ಮೂಲಕ ವಿಜಯಪುರ ಜೊತೆಗಿನ ನನ್ನ ಸಂಬಂಧವನ್ನು ಶಾಶ್ವತಗೊಳಿಸಿದಂತಾಗಿದೆ. ನನ್ನ ಮೇಲೆ ಈಗ ಮತ್ತಷ್ಟು ಜವಾಬ್ದಾರಿಗಳು ಮತ್ತಷ್ಟು ಕೆಲಸಗಳನ್ನು ಮಾಡಬೇಕೆಂಬ ಹಂಬಲವನ್ನು ನೀವೆಲ್ಲರೂ ಹೆಚ್ಚಿಸಿದ್ದೀರಿ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಸಬಲಾ ಸಂಸ್ಥೆ ಮುಖ್ಯಸ್ಥೆ ಮಲ್ಲಮ್ಮ ಯಾಳವಾರ ಅಧ್ಯಕ್ಷತೆ ವಹಿಸಿದ್ದರು. ಡಾ. ರಬಿಯಾ ಮಿರ್ಧೆ, ಲಕ್ಷ್ಮಿ ಬಳಗೊಂಡ, ರಿಯಾಜ್ ಫಾರೂಕಿ, ನಿವೃತ್ತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ನಿವೃತ್ತ ಪ್ರಾಧ್ಯಾಪಕ ಎಸ್.ಬಿ.ಮಾಡಗಿ ಹಾಗೂ ಪ್ರೊ.ಎಸ್.ಎ.ಖಾಜಿ, ಪ್ರಭುಗೌಡ ಪಾಟೀಲ, ಡಾ.ಓಂಕಾರಗೌಡ ಕಾಕಡೆ ಮತ್ತಿತರರಿದ್ದರು.
ಡಾ.ಹರೀಶ ಹೆಗಡೆ ಪ್ರಾರ್ಥಿಸಿದರು. ಡಾ.ಬಾಬು ಸಜ್ಜನ ಸ್ವಾಗತಿಸಿದರು. ಮೈತ್ರಾ ಬಾಗೇವಾಡಿ ವಂದಿಸಿದರು. ಕಲ್ಪನಾ ಹಿರೇಮಠ ನಿರೂಪಿಸಿದರು.