ಮಡಿಕೇರಿ:
ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ಸುರೇಶ ಬುಧವಾರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಎಲ್ಲಾ ಕೊಠಡಿಗಳು, ಮೌಲ್ಯಮಾಪನ ಕೇಂದ್ರ, ಗ್ರಂಥಾಲಯ, ವಿಜ್ಞಾನ ಲ್ಯಾಬ್ ಹಾಗೂ ಕಂಪ್ಯೂಟರ್ ಲ್ಯಾಬ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಕೊಠಡಿಗಳಲ್ಲಿ ನೀರು ಸುರಿಯುತ್ತಿರುವುದನ್ನು ನೋಡಿದ ಕುಲಸಚಿವರು ತಕ್ಷಣ ಕೊಠಡಿಗಳ ನವೀಕರಣ ಆಗಬೇಕು. ಈ ಹಿನ್ನೆಲೆಯಲ್ಲಿ ಕುಲಪತಿಗಳ ಜತೆಗೂಡಿ ಸ್ಥಳೀಯ ಶಾಸಕರು, ಸಂಸದರಿಗೆ ಕಾಲೇಜಿನ ದುಸ್ಥಿತಿ ಬಗ್ಗೆ ಮಾಹಿತಿ ನೀಡಲಾಗುವುದು.
ಈ ಕಾಲೇಜಿಗೆ ದೊಡ್ಡ ಇತಿಹಾಸ ಇದ್ದು ಸುವರ್ಣ ಮಹೋತ್ಸವ ಆಚರಣೆ ಹತ್ತಿರ ಆಗುತ್ತಿದೆ. ಅದರಿಂದ ಸರ್ಕಾರದ ಗಮನ ತಂದು ಸರಿಪಡಿಸಲಾಗುವುದು. ಕೊಡಗು ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಶಿಕ್ಷಣ ಕೊಡುವಲ್ಲಿ ಕೊಡಗು ವಿಶ್ವವಿದ್ಯಾಲಯ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತದೆ.
ವಿಶ್ವವಿದ್ಯಾನಿಲ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪರೀಕ್ಷೆಗಳನ್ನ ಕಟ್ಟುನಿಟ್ಟಾಗಿ ನಡೆಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬೇಗಬೇಗನೆ ಮೌಲ್ಯಮಾಪನ ಮಾಡಿಸಿ ಪರೀಕ್ಷೆಯ ಫಲಿತಾಂಶ ಕೊಡಲಾಗುವುದು ಎಂದರು.
ಕುಲಸಚಿವರಾದ ನಂತರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಪ್ರಥಮವಾಗಿ ಭೇಟಿ ನೀಡಿದ ಸುರೇಶ ಅವರನ್ನು ಪ್ರಾಂಶುಪಾಲ ಮೇಜರ್ ಡಾ.ಬಿ. ರಾಘವ ಮತ್ತು ಪ್ರಾಧ್ಯಾಪಕರ ನೇತೃತ್ವದಲ್ಲಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಸಂಯೋಜಕರಾದ ಡಾ. ರವಿಶಂಕರ್, ಡಾ. ತಿಪ್ಪೇಸ್ವಾಮಿ, ಡಾ. ನಾಗರಾಜ್ ಕೆ.ಟಿ., ಡಾ. ಎಂ. ಪಿ. ಕೃಷ್ಣ, ಡಾ. ಮಂಜುನಾಥ್, ಡಾ. ಅರುಣ್ ಕುಮಾರ್ ಮತ್ತಿತರರು ಇದ್ದರು.