ಮಂಗಳೂರು: ಕರಾವಳಿಯಲ್ಲಿ ಗುರುವಾರ ಹೆಚ್ಚಿನ ಸಮಯ ಮೋಡಕವಿದ ವಾತಾವರಣ ಕಂಡುಬಂದಿತ್ತು, ಸಂಜೆ ವೇಳೆ ಮಂಗಳೂರು ನಗರ ಸಹಿತ ಹಲವಡೆ ಕೆಲವು ಹೊತ್ತು ಅಬ್ಬರದ ಮಳೆಯಾಗಿದೆ.
ದ.ಕ. ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವದಿಂದಲೇ ಜಿಟಿಜಿಟಿ ಮಳೆ ಕಾಣಿಸಿತ್ತು. ಬೆಳಗ್ಗೆ ಸ್ವಲ್ಪ ಹೊತ್ತು ಮಳೆಗೆ ಬಿಡುವು ಹೊರತುಪಡಿಸಿದರೆ ಇಡೀ ಮೋಡ ಆವರಿಸಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಅಷ್ಟಾಗಿ ನಿರಂತರ ಮಳೆಯಾಗದಿದ್ದರೂ ಮಂಗಳೂರಿನಲ್ಲಿ ಮಧ್ಯಾಹ್ನ , ಸಂಜೆ ಕೆಲವು ಹೊತ್ತು ಜಿಟಿಜಿಟಿ ಮಳೆ ಸುರಿದಿದೆ. ದ.ಕ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 5.1 ಮಿಮಿ ಮಳೆ ದಾಖಲಾಗಿತು.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆಗಳಿವೆ. ಈಗಿನಂತೆ ಅ.3ರಿಂದ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, 4ರಿಂದ ದಿನದ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂದ್ರಾ ಕರಾವಳಿಯ ಮೂಲಕ ಭೂ ಪ್ರವೇಶಿಸಿದ್ದು, ಅಲ್ಲಿಂದ ಗಾಳಿ, ಮೋಡದ ಪರಿಚಲನೆ ಉತ್ತರಾಭಿಮುಖವಾಗಿ ಚಲಿಸುವ ಲಕ್ಷಣಗಳಿವೆ. ಇದರಿಂದ ಮುಂಗಾರು ಮಾರುತಗಳನ್ನು ದುರ್ಬಲಗೊಳಿಸಿತ್ತಿದೆ. ಇನ್ನೊಂದು ವಾರದಲ್ಲಿ ಮುಂಗಾರು ಸಂಪೂರ್ಣ ಹಿಂದೆ ಸರಿಯುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.