ಚಾಮರಾಜನಗರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ನಾಗಮಲೆ ಭಕ್ತರ ಧಾರ್ಮಿಕ ಶ್ರದ್ಧಾಕೇಂದ್ರ. ಆದರೆ ಚಾರಣ (ಟ್ರಕ್ಕಿಂಗ್) ಹಿನ್ನಲೆ ಸರ್ಕಾರ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದ್ದು, ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ. ಆದ್ದರಿಂದ ನಾಗಮಲೆಗೆ ಪ್ರವೇಶಾವಕಾಶ ಕಲ್ಪಿಸುವಂತೆ ಭಕ್ತರಿಂದ ಒತ್ತಾಯ ಕೇಳಿ ಬಂದಿದೆ.
ಮಾದಪ್ಪನ ನೆಲೆಬೀಡಲ್ಲಿ ಒಂದಾದ ನಾಗಮಲೆ ಪುಣ್ಯಕ್ಷೇತ್ರ ಮ.ಬೆಟ್ಟದಿಂದ ಸುಮಾರು 15 ಕಿ.ಮೀ ಅಂತರವನ್ನು ಹೊಂದಿದ್ದು, ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ಇಲ್ಲಿಗೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ದೇವರ ದರ್ಶನ ಹಾಗೂ ಪೂಜೆ ಸಲ್ಲಿಸುವ ಸಲುವಾಗಿ ಅನಾದಿ ಕಾಲದಿಂದಲೂ ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದರು. ಜಾತ್ರಾ ವೇಳೆಯಲ್ಲಿ ಇಲ್ಲಿಗೆ ಭಕ್ತ ಸಾಗರವೇ ಹರಿದು ಬರುತ್ತಿತ್ತು. ಹಲವು ವರ್ಷಗಳ ಹಿಂದೆ ಈ ಮಾರ್ಗದಲ್ಲಿ ಖಾಸಗಿ ವ್ಯಕ್ತಿಗಳು ಜೀಪ್ ಸಂಚಾರವನ್ನು ಆರಂಭಿಸಿ ಅರಣ್ಯ ಇಲಾಖೆಗೆ ಶುಲ್ಕವನ್ನು ಪಾವತಿಸಿ ಮ.ಬೆಟ್ಟದಿಂದ ಇಂಡಿಗನತ್ತ ಗ್ರಾಮದವರೆಗೆ ಭಕ್ತರನ್ನು ಕರೆದೊಯ್ಯುತ್ತಿದ್ದರು. ಇದರಿಂದ ಭಕ್ತರಿಗೆ ಅನುಕೂಲವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಯಾವುದೇ ಅಡ್ಡಿ ಆತಂಕ ಇರಲಿಲ್ಲ.
ಆದರೆ 2024, ಜ.26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಮಾರ ಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಪರಿಸರ ತಜ್ಞರು ಅರಣ್ಯ ಉಳಿವಿನ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದರು. ಈ ದೆಸೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ರಾಜ್ಯದ ಎಲ್ಲಾ ಚಾರಣ ಪ್ರದೇಶಗಳಲ್ಲಿ ಭಕ್ತರ ಪ್ರವೇಶವನ್ನು ನಿಷೇಧಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದರು. ಈ ಹಿನ್ನಲೆ ಭಕ್ತರ ಧಾರ್ಮಿಕ ಕೇಂದ್ರ ಮಲೆಮಹದೇಶ್ವರ ವನ್ಯಜೀವಿ ವಿಭಾಗದದ ಪಾಲಾರ್ ವನ್ಯಜೀವಿ ವ್ಯಾಪ್ತಿಯಲ್ಲಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಫೆ.17 ರಿಂದ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದೆ.
ಇಲ್ಲಿಗೆ ಆಗಮಿಸುವ ಭಕ್ತರು ಧಾರ್ಮಿಕತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರೆ ವಿನಃ ಮೋಜು, ಮಸ್ತಿಗಾಗಿ ಅಲ್ಲ. ಆದರೆ ಪ್ರವೇಶವನ್ನು ನಿಷೇಧಿಸಿರುವುದು ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ. ಇತ್ತ ಉದ್ಯೋಗವಿಲ್ಲದೇ ಜೀಪ್ ಚಾಲಕರು ಕೂಲಿಗಾಗಿ ಬೇರೆಡೆಗೆ ತೆರಳಿದ್ದು, ಕಂಗಾಲಾಗಿದ್ದಾರೆ. ಜೀಪ್ ಸಂಚಾರವಿಲ್ಲದ ಪರಿಣಾಮ ಈ ಭಾಗದ ಗ್ರಾಮಗಳ ಜನರು ಕಾಲ್ನಡಿಗೆಯಲ್ಲೇ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಾಗಮಲೆ ಪ್ರದೇಶದ ಧಾರ್ಮಿಕತೆಯ ವಾಸ್ತವತೆಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರಕ್ಕೆ ಮನದಟ್ಟು ಮಾಡುವುದರ ಮೂಲಕ ತೆರಳಲು ಅನುಕೂಲ ಕಲ್ಪಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.