ಜಿಲ್ಲೆ

ಚಾಮುಂಡಿಬೆಟ್ಟದ ನಂದಿ ವಿಗ್ರಹ ರಕ್ಷಿಸಿ : ಮಾಜಿ ಮೇಯರ್ ಬಿ.ಎಲ್.ಭೈರಪ್ಪ

reportermys

ಮೈಸೂರು: ದೇಶದ 3ನೇ ಅತಿ ದೊಡ್ಡ ಏಕಶಿಲಾಮೂರ್ತಿ ಚಾಮುಂಡಿಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು ಬಿಟ್ಟು ನೀರು ಸೇರುತ್ತಿದ್ದು, ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕು ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಒತ್ತಾಯಿಸಿದ್ದಾರೆ.


ನಂದಿ 400 ವರ್ಷದ ಹಳೆಯ ವಿಗ್ರಹವಾಗಿದೆ. ಇದೀಗ ಮೇಲೆ ಕುಳಿಗಳು ಏಳುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ, ಪುರಾತತ್ವ ಇಲಾಖೆ ಮತ್ತು ಮುಜರಾಯಿ ಇಲಾಖೆ ಕಾಳಜಿ ವಹಿಸಿ ರಕ್ಷಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಈ ಹಿಂದೆ ಮಳೆ, ಗುಡುಗು ಸೇರಿದಂತೆ ಇತರ ಅವಘಡಗಳಿಂದ ವಿಗ್ರಹವನ್ನು ರಕ್ಷಿಸುವ ಸಂಬಂಧ ವೈಜ್ಞಾನಿಕವಾಗಿ ಬಣ್ಣ ಬಳಿಯಲಾಗಿತ್ತು. ಕೆಲ ವರ್ಷದಿಂದ ಅವೈಜ್ಞಾನಿಕ ರೀತಿಯಲ್ಲಿ ಬಣ್ಣ ಬಳಿಯಲಾಗುತ್ತಿದೆ. ಅಭಿಷೇಕದಲ್ಲಿ ನಾನಾ ಬಣ್ಣ ಬಳಸುವುದರಿಂದಲೂ ವಿಗ್ರಹದ ಬಣ್ಣ ಬೇರೆಯಾಗುತ್ತಿದ್ದು, ಇದರಿಂದ ನಂದಿ ಮೇಲೆ ಕುಳಿಗಳು ಏಳುತ್ತಿವೆ. ಜತೆಗೆ ವಿಗ್ರಹ ಬಿರುಕು ಬಿಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಬೆಟ್ಟದ ಮೇಲಿನ ಬಂಡೆಯಿಂದ ವಿಗ್ರಹವನ್ನು ಕೆತ್ತಲಾಗಿದೆ. ಅದು ಗಟ್ಟಿಯಾದ ಕಲ್ಲಲ್ಲ. ಬದಲಾಗಿ ಮೃದುವಾಗಿದೆ. ಬಣ್ಣ ತೆಗೆಯುವ ಮೊದಲೇ ನಂದಿ ವಿಗ್ರಹ ನೋಡಲು ಚೆನ್ನಾಗಿ ಕಾಣುತ್ತಿತ್ತು. ಮೊದಲಿಂದ ಬಣ್ಣದಲ್ಲಿ ವಿಗ್ರಹದ ಬಿರುಕು ಜಾಗದಲ್ಲಿ ಮಳೆ ನೀರು ಇಳಿಯುತ್ತಿರಲಿಲ್ಲ. ಆದರೆ, ಬಣ್ಣ ತೆಗೆದ ಬಳಿಕ ಸಮಸ್ಯೆ ಉಂಟಾಗುತ್ತಿದೆ. ಸಂಬಂಧಪಟ್ಟವರು ಗಮನಹರಿಸದೆ ಇದ್ದರೆ ಐತಿಹಾಸಿಕ ವಿಗ್ರಹ ಮುಂದಿನ ತಲೆಮಾರಿಗೆ ಉಳಿಯುವುದಿಲ್ಲ ಎಂದರು.


ಪ್ರಸಾದ ಯೋಜನೆಯಡಿ ಬೆಟ್ಟದ ಮೇಲಿನ ಕಾಮಗಾರಿಗಾಗಿ ಹಣ ಮಂಜೂರಾಗಿದೆ. ಆದರೆ, ಕಾಮಗಾರಿಯನ್ನು ಒಬ್ಬ ರಾಜಕಾರಣಿಗೆ ಹೆಸರು ತಂದುಕೊಡುವ ರೀತಿ ನಡೆಸಬಾರದು. ಬೆಟ್ಟದ ಮೇಲೆ ಕಾಮಗಾರಿಗಳನ್ನು ಕೈಗೊಂಡಿದ್ದರಿಂದಲೇ ಈಗ ಬೆಟ್ಟ ಅಲ್ಲಲ್ಲಿ ಕುಸಿಯುತ್ತಿದೆ. ಜತೆಗೆ, ರೋಪ್ ವೇ ಕಾಮಗಾರಿಗೂ ಸರ್ಕಾರ ಅನುದಾನ ಬಿಡುಗಡೆ ಮಾಡಿರುವುದನ್ನು ಸರಿಯಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಆರಂಭವಾಗಲಿದ್ದು, ಈ ಬಗ್ಗೆ ಏ.3ರಂದು ಸಾರ್ವಜನಿಕರ ಸಭೆ ಆಯೋಜಿಸಲಾಗಿದೆ ಎಂದರು.
ಮುಖಂಡ ವೆಂಕಟೇಶ್ ಇದ್ದರು.