ಜಿಲ್ಲೆ

ಶ್ರೀ ರಾಮ, ಚಾಮುಂಡೇಶ್ವರಿ ಅದ್ದೂರಿ ಮೆರವಣಿಗೆ

ಲಲಾಟಾಕ್ಷ ಎಸ್

ಸುಂಟಿಕೊಪ್ಪ: ಧಾರ್ಮಿಕ ಅಸಹಿಷ್ಣುತೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಧಾರ್ಮಿಕ ಸೌಹಾರ್ದತೆ, ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವಲ್ಲಿ ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದ ಶ್ರೀ ರಾಮ, ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಸಾಕ್ಷಿಯಾಯಿತು.


ದೇವಸ್ಥಾನ ಸಮಿತಿಯಿಂದ 68ನೇ ವರ್ಷದ ದಸರಾ ಮತ್ತು ವಿಜಯದಶಮಿ ಉತ್ಸವ ವಿಜೃಂಭಣೆಯಿಂದ ಮಂಗಳವಾರ ರಾತ್ರಿ ಸಂಪನ್ನಗೊಂಡಿತು. ಅ.15ರಿಂದ ಪ್ರಾರಂಭವಾದ ನವರಾತ್ರಿ ಉತ್ಸವವು 9 ದಿನಗಳ ಕಾಲ ದೇವಿಯ ವಿವಿಧ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜಯದಶಮಿಯ ದಿನದಂದು ಭವ್ಯವಾದ ಮಂಟಪ ಶೋಭಾಯಾತ್ರೆಯೊಂದಿಗೆ ತೆರೆಕಂಡಿತು.


ಮಂಗಳವಾರ ರಾತ್ರಿ ಮಹಾಪೂಜೆ ಬಳಿಕ ದೇವಾಲಯದಿಂದ ವಿದ್ಯುತ್‌ದೀಪಗಳ ಅಲಂಕೃತ ಭವ್ಯ ಮಂಟಪದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಇರಿಸಿ ನಂತರ ಚಿಕ್ಲಿಹೊಳೆ ಜಲಾಶಯದ ಬಳಿ ಆಗಮಿಸುವುದರೊಂದಿಗೆ 2 ಮಂಟಪಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.


ಸರ್ವಧರ್ಮಿಯರು ಮೆರವಣಿಗೆಯುದ್ದಕ್ಕೂ ತಂಪು ಪಾನೀಯ ಮತ್ತು ಸಿಹಿ ತಿನ್ನಿಸುಗಳನ್ನು ನೀಡಿ ಮೆರವಣಿಗೆಗೆ ಮೆರುಗು ನೀಡಿದರು. ಮೆರವಣಿಗೆಯಲ್ಲಿ ಮಕ್ಕಳು, ವಯಸ್ಕರು ಎಂಬ ಭೇದವಿಲ್ಲದೆ ರಸ್ತೆಯುದ್ದಕ್ಕೂ ಕೊಡಗಿನ ವಾಲಗ ಹಾಗೂ ಜಯಘೋಷ ಕೂಗಿ ಕುಣಿದು ಕುಪ್ಪಳ್ಳಿಸಿದರು.
ದೇವಾಲಯದ ವತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ್ ರೈ, ಕಾರ್ಯದರ್ಶಿ ರವಿ ಸೇರಿದಂತೆ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ನೂರಾರು ಜನರು ಪಾಲ್ಗೊಂಡಿದ್ದರು.