ಹನೂರು: ಪಟ್ಟಣ ಸಮೀಪದ ಬಟಗುಪ್ಪೆಯ ಶ್ರೀ ಚಾಮುಂಡೇಶ್ವರಿ ದೇಗುಲದಲ್ಲಿ ಗುರುವಾರ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ದೇವಿಗೆ ವಿಶೇಷ ಪೂಜೆ ನೆರವೇರಿದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ದೇವಿಯ ಮೂರ್ತಿಗೆ ಬೆಳಗ್ಗೆ ಪನ್ನೀರು, ಎಳನೀರು, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕ ನೆರವೇರಿಸಲಾಯಿತು. ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಪಂಚಾಮೃತ ಅಭಿಷೇಕ ಅರ್ಪಿಸಿ ಧೂಪ, ದೀಪದಾರತಿ, ಬೆಲ್ಲ, ನಿಂಬೆಹಣ್ಣಿನ ಆರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಲಾಯಿತು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿದರು. ದಾನಿಗಳಿಂದ ಅನ್ನಸಂತರ್ಪಣೆ ನಡೆಯಿತು.
ಸೆಸ್ಕ್ ಕಚೇರಿ: ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಆಚರಿಸಲಾಯಿತು. ದೇವಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಪೂಜೆ ನೆರವೇರಿಸಲಾಯಿತು. ಎಇಇ ರಂಗಸ್ವಾಮಿ, ಎಇಗಳಾದ ಆನಂದ್‌ಕುಮಾರ್, ಮಾದೇಶ್, ವೆಂಕಟೇಶ್, ಮಹೇಶ್, ವೆಂಕಟೇಶ್‌ಮೂರ್ತಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾರಿಮುತ್ತು, ಸದಸ್ಯರಾದ ಈಶಾ, ಸಣ್ಣಕಾಳಶೆಟ್ಟಿ, ಪ್ರಭಾಕರ್, ಕಚೇರಿ ನೌಕರರು ಇದ್ದರು.