ಕೆ.ಎಂ.ದೊಡ್ಡಿ: ಕಳೆದ ಬಾರಿ 10,35 ಲಕ್ಷ ಟನ್ ಕಬ್ಬು ಅರೆದು ದಾಖಲೆ ನಿರ್ಮಿಸಿದ್ದ ಇಲ್ಲಿನ ಚಾಂಷುಗರ್ ಕಾರ್ಖಾನೆ ಜೂ.1ರಿಂದ ಪುನರಾರಂಭಗೊಂಡಿದೆ. ಅಂತೆಯೇ ಈ ಬಾರಿ ಹಲವು ಕಾರಣದಿಂದ ಕಬ್ಬಿನ ಅಭಾವ ಎದುರಾಗುವ ಸಾಧ್ಯತೆ ಇದ್ದು, ಈ ನಡುವೆಯೂ 10 ಲಕ್ಷ ಟನ್ ಅರೆಯುವ ಗುರಿ ಹೊಂದಲಾಗಿದೆ.
ಹಿಂದಿನ ವರ್ಷದಲ್ಲಿ ಕಾರ್ಖಾನೆ ಪ್ರತಿದಿನ 3500 ಟನ್ ಅರೆಯುವ ಸಾಮರ್ಥ್ಯ ಹೊಂದಿತ್ತು. ಆದರೆ 2018ರಂದು ನೂತನ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಅಳವಡಿಸಿರುವ ಹಿನ್ನಲೆಯಲ್ಲಿ 5500 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಲಾಗಿದೆ. ಕಳೆದ ಸಾಲಿನಲ್ಲಿ ಕಬ್ಬು ನುರಿಸಿದ್ದ ಹಣವನ್ನು ರೈತರಿಗೆ ಸ್ವಲ್ಪ ವಿಳಂಬವಾದರೂ ಸಹ ಪೂರ್ಣ ಪ್ರಮಾಣದಲ್ಲಿ ನೀಡುವುದರ ಜತೆಗೆ ಬಾಕಿ ರಹಿತವಾಗಿ ಕಾರ್ಖಾನೆ ಆರಂಭಿಸಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ಅವಧಿಗೂ ಮುನ್ನ ಕಬ್ಬು ನುರಿಯುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದೆ. ಅಂದರೆ ಆಗಸ್ಟ್‌ನಲ್ಲಿ ಪ್ರಾರಂಭವಾಗುತ್ತಿದ್ದ ಕಾರ್ಖಾನೆ ಈ ಬಾರಿ ಎರಡು ತಿಂಗಳ ಮೊದಲೆ ಬಾಗಿಲು ತೆಗೆದಿದೆ.
ನೀರಿನ ಅಭಾವದ ನಿರೀಕ್ಷೆ: ನಿರೀಕ್ಷಿತ ಪ್ರಮಾಣದಲ್ಲಿ ಪೂರ್ವ ಮುಂಗಾರು ಬಂದಿಲ್ಲ. ಅತ್ತ ಕೆಆರ್‌ಎಸ್ ಡ್ಯಾಂನಲ್ಲಿರುವ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಪರಿಣಾಮ ಕಬ್ಬಿಗೂ ನೀರಿಲ್ಲದಂತಾಗಿರುವುದು ಒಂದೆಡೆಯಾದರೆ ಕಾರ್ಖಾನೆಗೆ ಅಗತ್ಯವಿರುವಷ್ಟು ನೀರಿನ ಲಭ್ಯತೆ ಆಗುವುದಿಲ್ಲ ಎನ್ನುವ ಆತಂಕವಿದೆ.
ಕಾರ್ಖಾನೆಗೆ ಮೆಳ್ಳಹಳ್ಳಿ ಹೆಬ್ಬಾಳದಿಂದ ನೀರು ಸರಬರಾಜು ಆಗುತ್ತಿದೆ. ಮಂಡ್ಯ ತಾಲೂಕಿನ ಭೂತನಹೊಸೂರು ಬಳಿ ಇರುವ ಹೆಬ್ಬಾಳದಿಂದ ನೀರು ಬರುತ್ತದೆ. ಹೆಬ್ಬಾಳಕ್ಕೆ ಸೋರಿಕೆ ನೀರು ಬರಲಿದ್ದು, ಈಗ ನಾಲೆಗಳೂ ಒಣಗುತ್ತಿರುವ ದಿನಗಳಲ್ಲಿ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿ ಕನ್ನಂಬಾಡಿ ಕಟ್ಟೆ ತುಂಬಿದರೆ ಮಾತ್ರ ನೀರಿನ ಕೊರತೆ ನೀಗಿಸಲು ಸಾಧ್ಯ. ಹಿಂದೆ ಬರಗಾಲದಿಂದ ನೀರಿನ ಕೊರತೆ ತೀವ್ರವಾಗಿ ಬೆಳೆಗಳಿಗೂ ನೀರಿಲ್ಲದೆ ಇಳುವರಿ ಕಡಿಮೆಯಾಗಿ ರೈತರು ಆರ್ಥಿಕ ನಷ್ಟ ಎದಯರಿಸಿದ ಉದಾಹರಣೆಗಳಿವೆ. ಜತೆಗೆ ಕಾರ್ಖಾನೆ ಸಹ ನೀರಿಗಾಗಿ ಪಂಪ್‌ಸೆಟ್‌ಗಳನ್ನು ಅವಲಂಬಿಸಿತ್ತು. ಇದಲ್ಲದೆ ಕಬ್ಬು ಕಟಾವು ಮಾಡಲು ಸ್ಥಳೀಯ ಕೂಲಿ ಕಾರ್ಮಿಕರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಬಳ್ಳಾರಿಯಿಂದ ಕೂಲಿ ಕಾರ್ಮಿಕರನ್ನು ಕರೆಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.