ಜಿಲ್ಲೆ

ನಿವೃತ್ತಿ ಜೀವನದಲ್ಲಿ ಕೃಷಿ ವೃತ್ತಿ

ಎ.ಎಸ್.ಮಣಿಕಂಠ

ಹನೂರು: ಉಪನ್ಯಾಸಕ ವೃತ್ತಿಯ ಮೂಲಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಇಲ್ಲೊಬ್ಬರು ತಮ್ಮ ನಿವೃತ್ತಿ ಜೀವನವನ್ನು ಕೃಷಿ ಕಾಯಕದಲ್ಲಿ ಕಳೆಯುತ್ತಿದ್ದು, ನೆಮ್ಮದಿಯ ಬದುಕನ್ನು ಕಂಡು ಕೊಂಡಿದ್ದಾರೆ. ಈ ಮೂಲಕ ನಿವೃತ್ತಿದಾರರಿಗೆ ಮಾದರಿಯಾಗಿದ್ದಾರೆ.

ಇವರೇ ಹನೂರು ತಾಲೂಕಿನ ಪಿ.ಜಿ ಪಾಳ್ಯ ಸಮೀಪದ ಬಸವನಗುಡಿಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿರುವ ನಿವೃತ್ತ ಪ್ರಾಂಶುಪಾಲ ನಾಗರಾಜು. ಜಯಮಣಿ ಮತ್ತು ಮಾದೇಗೌಡ ಪುತ್ರರಾದ ನಾಗರಾಜು ಅವರು ಪ್ರಾಥಮಿಕ ಶಿಕ್ಷಣವನ್ನು ಲೊಕ್ಕನಹಳ್ಳಿಯಲ್ಲಿ, ಪ್ರೌಢ ಶಿಕ್ಷಣವನ್ನು ರಾಮಾಪುರದಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪದವಿಯನ್ನು ಪಡೆದರು. 1987ರಲ್ಲಿ ಮಡಿಕೇರಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಬೋಧನಾ ವೃತ್ತಿ ಆರಂಭಿಸಿದ ಇವರು ಮೇಲುಕೋಟೆ, ಕೊಳ್ಳೇಗಾಲ ಹಾಗೂ ಲೊಕ್ಕನಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು.

2020ರಲ್ಲಿ ಬಡ್ತಿ ಹೊಂದಿ ಹನೂರಿನ ಜಿ.ವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು. 35 ವರ್ಷಗಳ ಕಾಲ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸಿದ ಇವರು 2021ರಲ್ಲಿ ನಿವೃತ್ತರಾದರು. ಇದೀಗ ತಮ್ಮ ನಿವೃತ್ತಿ ಜೀವನವನ್ನು ಕೃಷಿ ಕ್ಷೇತ್ರದಲ್ಲಿ ಕಳೆಯುತ್ತಿದ್ದು, ಸಂಪೂರ್ಣ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ತಂದೆಯ ಮಾಗದರ್ಶನದೊಂದಿಗೆ ಹೆಚ್ಚಿನ ಇಳುವರಿಯನ್ನು ಪಡೆಯುವುದರ ಮೂಲಕ ಕೃಷಿಯಲ್ಲಿ ಯಶಸ್ಸು ಗಳಿಸಿದ್ದು, ನೆಮ್ಮದಿಯುತ ಜೀವನವನ್ನು ರೂಪಿಸಿಕೊಂಡಿರುವುದು ನಿಜಕ್ಕೂ ಮೆಚ್ಚುವ ಸಂಗತಿ.

ತಂದೆಯ ಪ್ರೇರಣೆ: ಸುಮಾರು 60 ವರ್ಷಗಳಿಂದಲೂ ಕೃಷಿಯಲ್ಲಿ ತೊಡಗಿರುವ ಇವರ ತಂದೆ ಮಾದೇಗೌಡ ಹಲವು ಏಳು ಬೀಳುಗಳನ್ನು ಕಂಡು ಕೃಷಿಯಲ್ಲಿ ಉತ್ತಮ ಅನುಭವ ಪಡೆಯುವುದರ ಮೂಲಕ ಯಶಸ್ಸು ಗಳಿಸಿದ್ದು, ಅಪ್ಪಟ ರೈತರೆನಿಸಿದ್ದಾರೆ. ಈ ದಿಸೆಯಲ್ಲಿ ನಿವೃತ್ತ ಪ್ರಾಂಶುಪಾಲ ನಾಗರಾಜು ತಂದೆಯಿಂದ ಪ್ರೇರಣೆಗೊಂಡು ಕೃಷಿಯ ಬಗ್ಗೆ ಹಿಂದಿನಿಂದಲೂ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವುದರ ಮೂಲಕ ತಂದೆಗೆ ನೆರವಾಗುತ್ತಿದ್ದರು. ಹಾಗಾಗಿ ಅವರ ಕೃಷಿ ಮೇಲಿನ ಪ್ರೀತಿಯನ್ನು ನಿವೃತ್ತಿ ಜೀವನದಲ್ಲೂ ಮುಂದುವರಿಸಿದ್ದಾರೆ ಎನ್ನಬಹುದು.

ಸಮಗ್ರ ಬೇಸಾಯ: 14 ಎಕರೆ ಪಿತ್ರಾರ್ಜಿತ ಜಮೀನನ್ನು ಹೊಂದಿರುವ 62 ವರ್ಷದ ನಾಗರಾಜು ಅವರು ಕಳೆದ 2 ವರ್ಷದಿದ ಸಂಪೂರ್ಣ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಪ್ರಸ್ತುತ 5 ಎಕರೆಯಲ್ಲಿ ಬಾಳೆ ಫಸಲನ್ನು ಬೆಳೆದಿದ್ದು ಗೊನೆ ಬಿಡುವ ಹಂತದಲ್ಲಿದೆ. 2 ಎಕರೆಯಲ್ಲಿ ಬೆಳೆದಿರುವ ಅರಿಸಿಣ ಸಮೃದ್ಧಿಯಿಂದ ಕೂಡಿದೆ. ಇನ್ನು ತಲಾ 1 ಎಕರೆಯಲ್ಲಿ ಮೆಣಸಿನಕಾಯಿ, ರಾಗಿ ಹಾಗೂ ಜಾನುವಾರುಗಳಿಗೆ ಮೇವಿನ ಜೋಳವನ್ನು ಬೆಳೆದಿದ್ದಾರೆ. ಇನ್ನುಳಿದ 4 ಎಕರೆಯಲ್ಲಿ ಇದೀಗ ಬಾಳೆ ಸಸಿಯನ್ನು ಹಾಕಲಾಗಿದೆ. ಏತನ್ಮಧ್ಯೆ ಜಮೀನಿನಲ್ಲಿ 120 ತೆಂಗಿನ ಮರಗಳಿದ್ದು, ಇದರಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. 4 ಹಸು, 4 ಕುರಿಗಳನ್ನು ಹೊಂದಿರುವ ಇವರು ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡಿದ್ದಾರೆ. ಜತೆಗೆ ಮಾವು, ಸಪೋಟ, ನೆಲ್ಲಿಕಾಯಿ ಹಾಗೂ ನೇರಳೆ ಗಿಡಗಳನ್ನು ಬೆಳೆಸಿದ್ದು, ಕೃಷಿಯ ಬಗ್ಗೆ ಇನ್ನಿಲ್ಲದ ಆಸಕ್ತಿ ವಹಿಸಿದ್ದಾರೆ. ಉತ್ತಮ ಅನುಭವವನ್ನು ಪಡೆದಿದ್ದಾರೆ. ಈ ಮೂಲಕ ಸಮಗ್ರ ಬೇಸಾಯದ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಈ ಭಾಗದ ರೈತರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೊಟ್ಟಿಗೆ ಗೊಬ್ಬರಕ್ಕೆ ಹೆಚ್ಚಿನ ಆದ್ಯತೆ:
ಕೃಷಿ ಇಲಾಖೆಯಿಂದ ಕೃಷಿ ಹೊಂಡ ಪ್ರಯೋಜನ ಪಡೆದಿರುವ ಇವರು ವಿದ್ಯುತ್ ಇರುವ ವೇಳೆಯಲ್ಲಿ ಹೊಂಡದಲ್ಲಿ ನೀರನ್ನು ಶೇಖರಿಸಿ ಬೆಳೆಗಳಿಗೆ ಸಂಪೂರ್ಣ ಹನಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಕೊಟ್ಟಿಗೆ ಗೊಬ್ಬರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿರುವ ಇವರು ಎರೆಹುಳು ಗೊಬ್ಬರವನ್ನು ಸಹ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇನ್ನು ಬೆಳೆಗಳಿಗೆ ಕೀಟಬಾಧೆ ತಗುಲದಂತೆ ಇನ್ನಿಲ್ಲದ ಕಾಳಜಿಯನ್ನು ವಹಿಸಿದ್ದು, ಬೆಲ್ಲ, ಹಸುವಿನ ಮೂತ್ರ (ಗಂಜಳ) ಹಾಗೂ ದ್ವಿಧಾನ್ಯಗಳ ಹಿಟ್ಟಿನ ಮಿಶ್ರಣದಿಂದ ತಯಾರಿಸಿದ ಜೀವಾಮೃತ ದ್ರಾವಣವನ್ನು ಬೆಳೆಗಳಿಗೆ ಸಿಂಪಡಣೆ ಮಾಡುತ್ತಿದ್ದಾರೆ. ಇನ್ನು ಹೆಚ್ಚು ಇಳುವರಿಯನ್ನು ಪಡೆಯಲು ಹಾಲು, ಮೊಸರು, ತುಪ್ಪ ಹಾಗೂ ಗಂಜಳದಿಂದ ತಯಾರಿಸಿದ ಪಂಚಗವ್ಯ ದ್ರಾವಣವನ್ನು ಸಿಂಪಡಿಸುತ್ತಿರುವುದು ಇವರ ಕೃಷಿ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.

ರಸಗೊಬ್ಬರ ಮುಕ್ತ ಕೃಷಿಗೆ ನಿರ್ಧಾರ:
ಪ್ರಸ್ತುತ ದಿನಗಳಲ್ಲಿ ಬಹುತೇಕ ರೈತರು ಕೃಷಿಯಲ್ಲಿ ರಾಸಾಯನಿಕ ರಸಗೊಬ್ಬರವನ್ನು ಬಳಕೆ ಮಾಡುತ್ತಿದ್ದು, ಆಹಾರ ವಿಷಪೂರಿತವಾಗುತ್ತಿದೆ. ಜತೆಗೆ ಮಣ್ಣಿನ ಫಲವತ್ತತೆಯೂ ಕ್ಷೀಣಿಸುತ್ತಿದೆ. ಇದನ್ನು ಮನಗಂಡಿರುವ ನಾಗರಾಜು ಅವರು ರಸಗೊಬ್ಬರವನ್ನು ಬಳಸದೇ ಕೃಷಿ ಮಾಡಲು ನಿರ್ಧರಿಸಿದ್ದು, ಪಣ ತೊಟ್ಟಿದ್ದಾರೆ. ಈ ಮೂಲಕ ರೈತಾಪಿ ಸಮುದಾಯಕ್ಕೆ ಮಾದರಿಯಾಗಬೇಕು. ಇತರೆ ರೈತರು ಸಹ ಅನುಸರಿಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದ್ದಾರೆ. ಇದು ನಿಜಕ್ಕೂ ಮೆಚ್ಚುವ ಸಂಗತಿ ಎನ್ನಬಹುದು.

ಕುಟುಂಬಸ್ಥರು ಸಾಥ್:
ಕೃಷಿ ಕುಟುಂಬವಾಗಿರುವ ಇವರ ಕೃಷಿ ಕಾಯಕಕ್ಕೆ ತಂದೆ ಮಾದೇಗೌಂಡರ್ ಹಾಗೂ ತಾಯಿ ಜಯಮಣಿ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ಮೂಲಕ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇನ್ನು ಮೂವರು ಮಕ್ಕಳು ತಂದೆಯು ನಿವೃತ್ತಿ ಜೀವನದಲ್ಲೂ ಕೃಷಿ ಕಾಯಕದಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಥ್ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಎಷ್ಟೋ ಜನರು ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕು ಅಂದುಕೊಂಡಿರುತ್ತಾರೆ. ಆದರೆ ಇವರು ನಿವೃತ್ತಿ ಜೀವನವನ್ನು ಸಂಪೂರ್ಣ ಕೃಷಿಯಲ್ಲಿ ತೊಡಗುವುದರ ಮೂಲಕ ಇದರಲ್ಲೇ ನೆಮ್ಮದಿಯ ಜೀವನವನ್ನು ರೂಪಿಸಿಕೊಂಡಿರುವುದು ಇತರರಿಗೆ ಮಾದರಿಯಾಗಿದ್ದಾರೆ ಎನ್ನಬಹುದು.

ನನಗೆ ಕೃಷಿಯಲ್ಲಿ 60 ವರ್ಷದ ಅನುಭವವಿದೆ. ಇದೀಗ ನನ್ನ ಮಗ ನಿವೃತ್ತಿ ಜೀವನದಲ್ಲೂ ಸಂಪೂರ್ಣ ಕೃಷಿ ಕಾಯಕದಲ್ಲಿ ತೊಡಗಿರುವುದು ಖುಷಿಯ ವಿಚಾರ. ಹಾಗಾಗಿ ಆತನೊಂದಿಗೆ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದೇನೆ.-ಮಾದೇಗೌಡ, ನಾಗರಾಜು ತಂದೆ. ನನಗೆ ಹಿಂದಿನಿಂದಲೂ ಕೃಷಿಯ ಬಗ್ಗೆ ಹೆಚ್ಚಿನ ಒಲವಿತ್ತು. ಹಾಗಾಗಿ ನಿವೃತ್ತಿಯ ಬಳಿಕವೂ ಕೃಷಿ ಕಾರ್ಯದಲ್ಲಿ ತೊಡಗಿದ್ದೇನೆ. ತಂದೆಯ ಮಾರ್ಗದರ್ಶನದಿಂದ ಉತ್ತಮ ಅನುಭವ ದೊರೆಕಿದೆ. ಕೃಷಿ ಇಲಾಖೆಯಿಂದಲೂ ಉತ್ತಮ ಸಹಕಾರ ಸಿಗುತ್ತಿದೆ. ಈ ಕಾಯಕ ಜೀವನದಲ್ಲಿ ನೆಮ್ಮದಿಯನ್ನು ತಂದು ಕೊಟ್ಟಿದೆ. ಮುಂದಿನ ದಿನಗಳಲ್ಲಿ ರಸಗೊಬ್ಬರ ಮುಕ್ತ ಕೃಷಿ ಮಾಡಲು ನಿರ್ಧರಿಸಿದ್ದೇನೆ.-ನಾಗರಾಜು, ನಿವೃತ್ತ ಪ್ರಾಂಶುಪಾಲ.