ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ ವತಿಯಿಂದ ನೆಹರು ಮೈದಾನದಲ್ಲಿ ಆಯೋಜಿಸಲ್ಪಟ್ಟ ಇಂಡಿಪೆಂಡೆನ್ಸ್ ಡೇ ಕಪ್ ಫುಟ್‌ಬಾಲ್ ಟೂರ್ನಿಯ ಪದವಿ ವಿಭಾಗದಲ್ಲಿ ಚಾಂಪಿಯನ್ ಆದ ಯೆನಪೋಯ ಕಾಲೇಜು ತಂಡಕ್ಕೆ ಬಹುಮಾನ ವಿತರಿಸಲಾಯಿತು. ದ.ಕ. ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಅಸ್ಲಂ, ಕಾರ್ಯದರ್ಶಿ ಹುಸೇನ್ ಬೋಳಾರ, ರಾಜ್ಯ ಫುಟ್‌ಬಾಲ್ ಸಂಸ್ಥೆಯ ಸದಸ್ಯ ವಿಜಯ ಸುವರ್ಣ, ಖಜಾಂಚಿ ಫಿರೋಜ್ ಉಳ್ಳಾಲ್, ಸದಸ್ಯರಾದ ಅಬ್ದುಲ್ ಲತೀಫ್, ಸುಜಿತ್ ಕೆ.ವಿ., ಅನಿಲ್ ಪಿ.ವಿ.ಮುಂತಾದವರು ಉಪಸ್ಥಿತರಿದ್ದರು.  
ಜಿಲ್ಲೆ

ಯೆನಪೋಯ ಸಂಸ್ಥೆ ಡಬಲ್ ಚಾಂಪಿಯನ್, ಇಂಡಿಪೆಂಡೆನ್ಸ್ ಡೇ ಕಪ್ ಫುಟ್‌ಬಾಲ್ ಟೂರ್ನಿ, ಅಲೋಶಿಯಸ್‌ಗೂ ಪ್ರಶಸ್ತಿ

ಮಂಗಳೂರು: ನೆಹರು ಮೈದಾನದಲ್ಲಿ ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲ್ಪಟ್ಟ ಇಂಡಿಪೆಂಡೆನ್ಸ್ ಡೇ ಕಪ್ ಫುಟ್‌ಬಾಲ್ ಟೂರ್ನಿಯ ಹೈಸ್ಕೂಲ್ ಮತ್ತು ಪದವಿ ಕಾಲೇಜು ವಿಭಾಗದಲ್ಲಿ ಯೆನಪೋಯ ಶಿಕ್ಷಣ ಸಂಸ್ಥೆಯ ತಂಡ ಪ್ರಶಸ್ತಿ ಜಯಿಸಿದ್ದು ಡಬಲ್ ಚಾಂಪಿಯನ್ ಆಗಿದೆ.

ಹೈಸ್ಕೂಲ್ ವಿಭಾಗದ ಫೈನಲ್‌ನಲ್ಲಿ ಯೆನಪೋಯ ತಂಡ ಸೇಂಟ್ ತೆರೇಸಾ ತಂಡವನ್ನು 4-0 ಅಂತರದಿಂದ ಸೋಲಿಸಿ ಪ್ರಶಸ್ತಿ ಜಯಿಸಿತು. ಪಿ.ಯು.ಕಾಲೇಜು ವಿಭಾಗದಲ್ಲಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ತಂಡ 2-1 ಗೋಲುಗಳಿಂದ ಉಳ್ಳಾಲದ ಪಾಂಡ್ಯರಾಜ್ ಬಳ್ಳಾಲ್ ಪಿಯು ಕಾಲೇಜು ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಯ ಎರಡು ನಿಮಿಷ ಇರುವಾಗ ಉಭಯ ತಂಡಗಳು 1-1 ಸಮಬಲ್ಲಿತ್ತು. ಆ ಸಂದರ್ಭ ಅಲೋಶಿಯಸ್ ತಂಡ ಗೋಲು ದಾಖಲಿಸಿ ಪಾಂಡ್ಯರಾಜ್ ಬಳ್ಳಾಲ್ ತಂಡವನ್ನು ರನ್ನರ್‌ಅಪ್ ಸ್ಥಾನಕ್ಕೆ ತಳ್ಳಿತು.

ಪದವಿ ಕಾಲೇಜು ವಿಭಾಗದಲ್ಲಿ ಯೆನಪೋಯ ಕಾಲೇಜು ತಂಡ ಸೇಕ್ರೆಡ್ ಹಾರ್ಟ್ ಮಡಂತ್ಯಾರು ಕಾಲೇಜಿನ ತಂಡವನ್ನು 1-0 ಅಂತರದಿಂದ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿತು.

ದ.ಕ. ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹುಸೇನ್ ಬೋಳಾರ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಫುಟ್‌ಬಾಲ್ ಸಂಸ್ಥೆಯ ಸದಸ್ಯ ವಿಜಯ ಸುವರ್ಣ ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ ಫಿರೋಜ್ ಉಳ್ಳಾಲ್, ಸದಸ್ಯರಾದ ಅಬ್ದುಲ್ ಲತೀಫ್, ಸುಜಿತ್ ಕೆ.ವಿ., ಅನಿಲ್ ಪಿ.ವಿ.ಮುಂತಾದವರು ಉಪಸ್ಥಿತರಿದ್ದರು.

ಸಚಿವ ದಿನೇಶ್ ಗುಂಡೂರಾವ್ ಭೇಟಿ

ಆರೋಗ್ಯ ಸಚಿವ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಫುಟ್‌ಬಾಲ್ ಮೈದಾನಕ್ಕೆ ಆಗಮಿಸಿ ಮೈದಾನದ ಅಭಿವೃದ್ಧಿ ಪಡಿಸುವ ಬಗ್ಗೆ ಇದ್ದ ಪ್ರಸ್ಥಾವನೆ ಬಗ್ಗೆ ಆಗಿರುವ ಪ್ರಗತಿಯ ಬಗ್ಗೆ ಎಂದು ಪರಿಶೀಲನೆ ನಡೆಸುವ ಭರವಸೆ ನೀಡಿದರು. ಈ ಸಂದರ್ಭ ಡಾಕ್ಟರೇಟ್ ಪದವಿ ಪಡೆದ ಸದಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಟೀಮ್ ಬಿ ಹ್ಯೂಮನ್ ತಂಡದ ಅಧ್ಯಕ್ಷ ಆಸಿಫ್, ಮಹಮ್ಮದ್ ಷಲೀಲ್ ಅವರನ್ನು ಸನ್ಮಾನಿಸಲಾಯಿತು.